
ನವದೆಹಲಿ: ರಸ್ತೆ ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ದಾಖಲಿಸುವ ಅಥವಾ ಅಪಘಾತದ ಬಗ್ಗೆ ಮಾಹಿತಿ ನೀಡುವವರ ರಕ್ಷಣೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.
ನ್ಯಾಯಮೂರ್ತಿ ವಿ.ಗೋಪಾಲ ಗೌಡ, ಸರ್ಕಾರದ ಅಧಿಸೂಚನೆಗೆ ಒಪ್ಪಿಗೆ ನೀಡಿದ್ದಾರೆ. ಈ ಅಧಿಸೂಚನೆಯಡಿ ರಸ್ತೆ ಅಪಘಾತದ ಸಾಕ್ಷಿಗಳಿಗೂ ರಕ್ಷಣೆ ನೀಡಲಿದ್ದು, ಇನ್ನು ಮುಂದೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಹೋದವರು ಆಘಾತಕಾರಿ ಅನುಭವಗಳನ್ನು ಎದುರಿಸಬೇಕಾಗಿಲ್ಲ. ಸುಪ್ರೀಂ ಕೋರ್ಟ್ ನ ಒಪ್ಪಿಗೆಯಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಕಾನೂನು ಆಗಲಿದ್ದು, ಎಲ್ಲಾ ರಾಜ್ಯಗಳು ಪಾಲಿಸಬೇಕಾಗುತ್ತವೆ.
ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಹೋದರೆ ನಂತರ ಪೊಲೀಸರು ಮತ್ತು ಇತರ ಕಾನೂನು ಸಂಸ್ಥೆ ಅಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾಗುತ್ತದೆ ಎಂಬ ಭಯದಿಂದ ಇದುವರೆಗೆ ಜನರು ಹೆದರುತ್ತಿದ್ದರು. ಆದರೆ ಈಗ ಕಾನೂನು ಸುಗಮವಾಗಿರುವುದರಿಂದ ಜನರು ಸಹಾಯ ಮಾಡಲು ಹೋಗಬಹುದು ಮತ್ತು ಅಪಘಾತಕ್ಕೊಳಗಾದ ನೂರಾರು ಜನ ಬದುಕುಳಿಯಬಹುದು ಎಂಬ ನಿರೀಕ್ಷೆಯಿದೆ.
ಪರೋಪಕಾರ ಮಾಡುವವರು ಪೊಲೀಸರ, ವಿಚಾರಣೆ ಅಧಿಕಾರಿಗಳಿಂದ ಕಿರುಕುಳ ತಪ್ಪಿಸಲು ಸರಿಯಾದ ಮಾರ್ಗಸೂಚಿ ತನ್ನಿ ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಕಳೆದ ವರ್ಷ ಮೇ 12ರಂದು ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.
ಸರ್ಕಾರೇತರ ಸಂಘಟನೆ ಸೇವ್ ಲೈಫ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. 2014ರಲ್ಲಿ ದೇಶದಲ್ಲಿ 4 ಲಕ್ಷಕ್ಕಿಂತಲೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ.
ಏನಿದೆ ಹೊಸ ಕಾನೂನಿನಲ್ಲಿ?: ಒಬ್ಬರು ರಸ್ತೆ ಬದಿ ನಿಂತುಕೊಂಡಿದ್ದಾಗ ಅಲ್ಲಿ ಅಪಘಾತವಾಯಿತು ಎಂದಿಟ್ಟುಕೊಳ್ಳಿ. ಕೂಡಲೇ ಅಲ್ಲಿದ್ದವರು ಅಪಘಾತಕ್ಕೀಡಾದವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು. ಪೊಲೀಸರು ಅವರ ಗುರುತು, ವಿಳಾಸವನ್ನು ಕೇಳುವಂತಿಲ್ಲ. ವ್ಯಕ್ತಿಯೇ ಸ್ವತಃ ಬೇಕೆಂದರೆ ತನ್ನ ವಿಳಾಸ, ಮಾಹಿತಿ ನೀಡಬಹುದು. ನೋಂದಾಯಿತ ಯಾವುದೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಪರೋಪಕಾರ ಮಾಡಿದವರನ್ನು ವಿಚಾರಣೆ ನಡೆಸುವಂತೆ ಅಥವಾ ರೋಗಿಯನ್ನು ದಾಖಲು ಮಾಡಿಕೊಳ್ಳಲು ನೋಂದಾವಣೆ ಶುಲ್ಕವನ್ನು ಕೇಳುವಂತಿಲ್ಲ.
ಯಾವ ಪೊಲೀಸ್ ಅಧಿಕಾರಿ ಕೂಡ ಸಹಾಯ ಮಾಡಿದವರನ್ನು ಪ್ರಶ್ನೆಯನ್ನು ಕೇಳುವಂತಿಲ್ಲ. ನಂತರ ಅವರಿಗೆ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಅಪಘಾತದ ಮಾಹಿತಿ ನೀಡುವವರನ್ನು ಬಲವಂತ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.
ಸಾಕ್ಷಿದಾರರು ಸ್ವ ಇಚ್ಛೆಯಿಂದ ನ್ಯಾಯಾಲಯಕ್ಕೆ ಹೋಗಿ ಕೇಸಿನ ಬಗ್ಗೆ ಮಾಹಿತಿ ನೀಡಲು ಮುಂದಾದರೆ ವಿಚಾರಣಾ ನ್ಯಾಯಾಧೀಶರು ತಮ್ಮ ವಿಚಾರಣೆಯನ್ನು ಒಂದೇ ಸಲಕ್ಕೆ ಮುಗಿಸಬಹುದು ಎಂಬ ಅಂಶಗಳು ಸರ್ಕಾರದ ಮಾರ್ಗಸೂಚಿಯಲ್ಲಿದೆ.
Advertisement