
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಉಂಟಾದ ವಾಗ್ವಾದ ಸಂಬಂಧ ಟಿಎಂಸಿ ಸಂಸದನನ್ನು ಹೊರ ಹೋಗುವಂತೆ ಸಭಾಪತಿ ಹಮೀದ್ ಅನ್ಸಾರಿ ಸೂಚಿಸಿರುವ ಘಟನೆ ನಡೆದಿದೆ. ಸುಖೇಂದು ಅವರನ್ನು ಹೊರಹೋಗಲು ಆದೇಶಿಸಿದ ಬೆನ್ನಲ್ಲೇ ಎಲ್ಲಾ ಟಿಎಂಸಿ ಸದಸ್ಯರೂ ಸದನದಿಂದ ಹೊರನಡೆದರು.
ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಈಗಿಂದೀಗಲೇ ತುರ್ತು ಹೇಳಿಕೆ ನೀಡಬೇಕು ಎಂದು ಸುಖೇದು ಸೇಖರ್ ರಾಯ್ ಅವರು ತೀವ್ರವಾಗಿ ಆಗ್ರಹಿಸಿದರು. ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಬುಧವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳನ್ನು ಸದನದ ಮುಂದಿಡುವುದಾಗಿ ಪ್ರಕಟಿಸಿದ್ದಾರೆ. ಬಿಜೆಪಿ ನಾಯಕ, ರಾಜ್ಯಸಭೆಯ ನೂತನ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭಿಸಿದ್ದು, ಬುಧವಾರ ಚರ್ಚೆ ಮುಂದುವರೆಸಲು ಎಲ್ಲಾ ಸದಸ್ಯರೂ ಒಪ್ಪಿಕೊಂಡಿದ್ದರು.
ಆದರೆ ಬುಧವಾರದವರೆಗೆ ಕಾಯಲು ಸಿದ್ಧರಿಲ್ಲದ ರಾಯ್ ಕಾಂಗ್ರೆಸ್ ಮತ್ತು ಬಿಜೆಪಿ ಎರಡರನ್ನೂ ಗುರಿಯಾಗಿಟ್ಟುಕೊಂಡು ‘ರಕ್ಷಣಾ ಸಚಿವರು ತುರ್ತಾಗಿ ಈದಿನವೇ ಹೇಳಿಕೆ ನೀಡಬೇಕು’ ಎಂದು ಆಗ್ರಹಿಸತೊಡಗಿದರು. ಅವರ ಆಗ್ರಹ ನಿರಂತರವಾದಾಗ ಸಭಾಪತಿಗಳು ಸದಸ್ಯನ ಮೇಲೆ ಒಂದು ದಿನದ ನಿಷೇಧ ಹೇರಿ ಸದನದಿಂದ ಹೊರನಡೆಯುವಂತೆ ಆಜ್ಞಾಪಿಸಿದರು.
Advertisement