
ನವದೆಹಲಿ: ಐಸಿಎಸ್ ಇಯ 10ನೇ ತರಗತಿಯಲ್ಲಿ ಶೇಕಡಾ 96.46ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇಕಡಾ 98.5 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಬಾಲಕರನ್ನು ಹಿಂದಿಕ್ಕಿದ್ದಾರೆ.
ಐಎಸ್ ಸಿಯ 12ನೇ ತರಗತಿ ಫಲಿತಾಂಶ ಕೂಡ ಪ್ರಕಟಗೊಂಡಿದ್ದು, ಕಳೆದ ವರ್ಷಗಳಿಗಿಂತ ಫಲಿತಾಂಶದಲ್ಲಿ ಕ್ರಮವಾಗಿ ಶೇಕಡಾ 0.01 ಮತ್ತು ಶೇಕಡಾ 0.18ರಷ್ಟು ಏರಿಕೆ ಕಂಡುಬಂದಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೆರ್ರಿ ಅರತೂನ್ ತಿಳಿಸಿದ್ದಾರೆ.
ಹತ್ತನೇ ತರಗತಿಯಲ್ಲಿ ಮೊದಲ ಸ್ಥಾನ ಒಡಿಶಾದ ಅಬಿನೀತ್ ಪರಿಚ್ಚಾ ಶೇಕಡಾ 99.2ರಷ್ಟು ಗಳಿಸಿದರೆ ಬೆಂಗಳೂರಿನ ಸುದರ್ಶನ್ ಆರ್ ಮುಂಬೈಯ ಇಶಾ ಸೇತಿ, ಕಂಡಿವಾಲಾದ ಮನನ್ ಮನೀಶ್ ಶ್ಹಾ, ಲಕ್ನೋದ ಜ್ಯೋಸ್ನಾ ಶ್ರೀವಾಸ್ತವ್ ಶೇಕಡಾ 99 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು 10 ಮಂದಿ ವಿದ್ಯಾರ್ಥಿಗಳು ಶೇಕಡಾ 98.8 ಅಂಕ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.
12ನೇ ತರಗತಿ ಫಲಿತಾಂಶದಲ್ಲಿ ಮುಂಬೈಯ ಆದ್ಯ ಮಡ್ಡಿ ಶೇಕಡಾ 99.75 ಅಂಕ ಗಳಿಸುವ ಮೂಲಕ ಪ್ರಥಮ, ಮುಂಬೈಯ ಮಾನ್ಸಿ ಪುಗ್ಗಲ್ ಶೇಕಡಾ 99.50 ಅಂಕ ಪಡೆಯುವ ಮೂಲಕ ದ್ವಿತೀಯ ಹಾಗೂ ಕೋಲ್ಕತ್ತಾದ ಅರ್ಕದೇಬ್ ಸೇನ್ ಗುಪ್ತಾ ಮತ್ತು ಕವಿತಾ ದೇಸಾಯಿ ಶೇಕಡಾ 99.25 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.
ಹತ್ತನೇ ತರಗತಿಯಲ್ಲಿ ಒಟ್ಟು 1 ಲಕ್ಷದ 68 ಸಾವಿರದ 591 ವಿದ್ಯಾರ್ಥಿಗಳು, 12ನೇ ತರಗತಿಯಲ್ಲಿ 72 ಸಾವಿರದ 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಪ್ರಾದೇಶಿಕವಾರು ಫಲಿತಾಂಶದಲ್ಲಿ ದಕ್ಷಿಣ ಪ್ರಾಂತ್ಯದ ವಿದ್ಯಾರ್ಥಿಗಳು ಹೆಚ್ಚು ಸ್ಕೋರ್ ಮಾಡಿದ್ದಾರೆ. ವಿದೇಶಗಳಲ್ಲಿನ ಶಾಲೆಗಳಲ್ಲಿ ಕೂಡ ಶೇಕಡಾ 100 ಫಲಿತಾಂಶ ಬಂದಿದೆ.
Advertisement