ಹದಗೆಟ್ಟ ಕನ್ಹಯ್ಯಾ ಆರೋಗ್ಯ, ತುರ್ತು ಘಟಕದಲ್ಲಿ ಚಿಕಿತ್ಸೆ: ನಿರಶನ ಕೈಬಿಟ್ಟ 5 ವಿದ್ಯಾರ್ಥಿಗಳು

ಅಮರಣಾಂತ ನಿರಶನ ಉಪವಾಸ ನಡೆಸಿ ಅಸ್ವಸ್ಥಗೊಂಡಿದ್ದ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ...
ಚಿಕಿತ್ಸೆ ಪಡೆಯುತ್ತಿರುವ ಕನ್ಹಯ್ಯಾ ಕುಮಾರ್
ಚಿಕಿತ್ಸೆ ಪಡೆಯುತ್ತಿರುವ ಕನ್ಹಯ್ಯಾ ಕುಮಾರ್
ನವದೆಹಲಿ: ಅಮರಣಾಂತ ನಿರಶನ ಉಪವಾಸ ನಡೆಸಿ ಅಸ್ವಸ್ಥಗೊಂಡಿದ್ದ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕನ್ಹಯ್ಯಾ ಅವರನ್ನು ಗುರುವಾರ ವಿಶ್ವವಿದ್ಯಾಲದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದರಿಂದ ಅವರ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಇಳಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಕನ್ಹಯ್ಯಾ ಅವರನ್ನು ಎಐಐಎಂಎಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ನಿರಶನ ನಿರತ ಇತರೆ ವಿದ್ಯಾರ್ಥಿಗಳ ಆರೋಗ್ಯವೂ ಹದಗೆಟ್ಟಿದ ಹಿನ್ನಲೆಯಲ್ಲಿ ಐವರು ವಿದ್ಯಾರ್ಥಿಗಳು ತಮ್ಮ ನಿರಶನವನ್ನು ಕೈಬಿಟ್ಟು, ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. 
ಫೆಬ್ರವರಿ 9ರಂದು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ಸಂಬಂಧ ವಿಶ್ವವಿದ್ಯಾಲಯ ನೇಮಿಸಿದ್ದ ಆಂತರಿಕ ಸಮಿತಿ ನೀಡಿದ ವರದಿ ಅನ್ವಯ ಶಿಸ್ತು ಕ್ರಮ ಕೈಗೊಂಡಿರುವುದನ್ನು ವಿರೋಧಿಸಿ ಏಪ್ರಿಲ್ 28ರಿಂದ ಕನ್ಹಯ್ಯಾ, ಉಮರ್ ಖಾಲೀದ್ ಸೇರಿದಂತೆ 19 ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. 
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಮೂರಿಂದ ನಾಲ್ಕು ಕೆಜಿ ತೂಕ ಕಡಿಮೆಯಾಗಿದೆ. ಕಳೆದ 8 ದಿನಗಳಿಂದ ಉಪವಾಸ ನಡೆಸುತ್ತಿದ್ದರು, ಜೆಎನ್ ಯು ಆಡಳಿತ ಮಂಡಳಿ ನಮ್ಮ ಬೇಡಿಕೆಗೆ ಮಣಿಯುತ್ತಿಲ್ಲ ಎಂದು ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲೀದ್ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com