ನವದೆಹಲಿ: ಬೆಲ್ಜಿಯಂ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಓಲಾ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಜ್ ಸಿಂಗ್ ಬಂಧಿತ ಆರೋಪಿ. ರಾಜ್ ಸಿಂಗ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ನಿನ್ನೆ ರಾತ್ರಿ ದೆಹಲಿಯಲ್ಲಿ 23 ವರ್ಷದ ಬೆಲ್ಜಿಯಂ ಯುವತಿಗೆ ಓಲಾ ಕ್ಯಾಬ್ ಚಾಲಕ ಲೈಂಗಿಕ ಕಿರುಕುಳ ನೀಡಿದ್ದನು. ಈ ಸಂಬಂಧ ಯುವತಿ ಸಿಆರ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಕ್ಯಾಬ್ ನಲ್ಲಿ ಬರಬೇಕಾದರೆ ಮದ್ಯ ದಾರಿಯಲ್ಲಿ ನನಗೆ ಆತ ಚುಂಬಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ತದ ನಂತರ ನನ್ನನ್ನು ಸಿಆರ್ ಪಾರ್ಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಆಕೆ ದೂರು ದಾಖಲಿಸಿದ್ದಳು.
ದೂರು ದಾಖಲಿಸಿಕೊಂಡಿರುವ ಪೊಲೀಸರು ಬುಕ್ಕಿಂಗ್ ವಿವರವನ್ನು ಪಡೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.