
ಉಜ್ಜಯಿನಿ: ಒಂದು ತಿಂಗಳ ಕಾಲ ನಡೆಯುವ ಸಿಂಹಸ್ಥ ಕುಂಭ ಮೇಳದ ಎರಡನೇ ಶಾಹಿ ಸ್ನಾನ ಸೋಮವಾರ ಮುಂಜಾನೆ ಆರಂಭಗೊಂಡಿದ್ದು, ಸಾಧುಗಳು ರಾಮಘಾಟ್ ನಲ್ಲಿ ಮಧ್ಯಾಹ್ನದವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ ಜೊತೆಗೆ ಸಾವಿರಾರು ಭಕ್ತರು ನೆರೆದಿದ್ದಾರೆ.
ಇಂದು ಅಕ್ಷಯ ತೃತೀಯ ಆಗಿರುವುದರಿಂದ ಪುಣ್ಯಸ್ನಾನ ಮಾಡುವುದು ಒಳ್ಳೆಯದು ಎಂದು ಜನ ನಂಬಿದ್ದಾರೆ. ಸರ್ಕಾರದ ಅಧಿಕಾರಿಗಳು ಹೇಳುವ ಪ್ರಕಾರ ಸುಮಾರು 25 ಲಕ್ಷ ಜನರು ಎರಡನೇ ಸ್ನಾನಕ್ಕೆ ಸೇರಿದ್ದಾರೆ. 12 ವರ್ಷಗಳ ನಂತರ ನಡೆಯುತ್ತಿರುವ ಮಹಾ ಸಿಂಹಸ್ಥ ಮೇಳ ಇದಾಗಿದೆ.
ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯವೂ ಒಂದಾಗಿದೆ. ತ್ರಿಕಾಲದ 13 ಆಕಾರಗಳನ್ನು ಒಂದರ ನಂತರ ಒಂದರಂತೆ ಶಿಪ್ರಾ ನದಿ ತೀರದಲ್ಲಿ ಇಟ್ಟು ಸ್ನಾನ ಮಾಡಿಸಲಾಗುತ್ತದೆ. ಈ ವರ್ಷ ತೃತೀಯ ಲಿಂಗಿಗಳೂ ಕೂಡ ಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅವರು ಇಂದು ಪವಿತ್ರ ಸ್ನಾನ ತೆಗೆದುಕೊಳ್ಳಬಹುದೆಂದು ಹೇಳಿದ್ದರೂ ಕೂಡ ನಂತರ ಮೇ 12ಕ್ಕೆ ಮುಂದೂಡಲಾಯಿತು.
ಭಕ್ತಾದಿಗಳ ನೂಕುನುಗ್ಗಲು ಆಗದಂತೆ ಮತ್ತು ಅಹಿತಕರ ಘಟನೆ ನಡೆಯದಂತೆ ತಡೆಯಲು ಕೇಂದ್ರ ಮತ್ತು ರಾಜ್ಯ ರಕ್ಷಣಾ ಪಡೆಗಳ 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಉಜ್ಜಯನಿಯ ಪೊಲೀಸ್ ಮಹಾ ನಿರ್ದೇಶಕ ಮಧು ಕುಮಾರ್ ತಿಳಿಸಿದ್ದಾರೆ.
Advertisement