ಡೇ ಕೇರ್ ಸೆಂಟರ್‌ನಲ್ಲಿ ತುಂಡಾಯ್ತು ಮೂರರ ಹರೆಯದ ಬಾಲಕಿಯ ಹೆಬ್ಬೆರಳು!

ದೆಹಲಿ ಸಮೀಪದ ಗುರ್‌ಗಾಂವ್‌ನಲ್ಲಿರುವ ಡೇ ಕೇರ್ ಸೆಂಟರ್‌ವೊಂದರಲ್ಲಿ ಮೂರರ ಹರೆಯದ ಮಗುವಿನ ಹೆಬ್ಬೆರಳು ತುಂಡಾದ ಘಟನೆ ಬಗ್ಗೆ ಮಗುವಿನ ಅಮ್ಮ...
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈರಾ (ಕೃಪೆ: ಫೇಸ್ ಬುಕ್)
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈರಾ (ಕೃಪೆ: ಫೇಸ್ ಬುಕ್)
ಗುರ್‌ಗಾಂವ್: ದೆಹಲಿ ಸಮೀಪದ ಗುರ್‌ಗಾಂವ್‌ನಲ್ಲಿರುವ ಡೇ ಕೇರ್ ಸೆಂಟರ್‌ವೊಂದರಲ್ಲಿ ಮೂರರ ಹರೆಯದ ಮಗುವಿನ ಹೆಬ್ಬೆರಳು ತುಂಡಾದ ಘಟನೆ ಬಗ್ಗೆ ಮಗುವಿನ ಅಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಆ ಪೋಸ್ಟ್ ಈಗ ವೈರಲ್ ಆಗಿದೆ.
ಏಪ್ರಿಲ್ 28ರಂದು ಈ ಘಟನೆ ನಡೆದಿದ್ದು, ಘಟನೆ ಬಗ್ಗೆ ಮಗುವಿನ ತಾಯಿ ಶಿವಾನಿ ಶರ್ಮಾ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಈಗಾಗಲೇ 9,000ಕ್ಕಿಂತಲೂ ಹೆಚ್ಚು ಮಂದಿ ಈ ಪೋಸ್ಟ್‌ನ್ನು ಶೇರ್ ಮಾಡಿದ್ದಾರೆ. 
ಶಿವಾನಿ ಶರ್ಮಾ ಆಕೆಯ ಮಗಳು ಮೈರಾಳನ್ನು ಚೆರುಬ್ ಏಂಜಲ್ ಎಂಬ ಡೇ ಕೇರ್ ಸೆಂಟರ್‌ಗೆ ಬಿಟ್ಟು ಬಂದು ಅರ್ಧಗಂಟೆಯಾದಾಗ ಡೇ ಕೇರ್ ಸೆಂಟರ್ ನಿಂದ ಫೋನ್ ಬಂದಿತ್ತು. ಮಗಳ ಬಲಗೈ ಹೆಬ್ಬೆರಳಿಗೆ ತೀವ್ರಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಟೀಚರ್ ಹೇಳಿದ್ದರು. 
ಆಸ್ಪತ್ರೆಗೆ ಹೋದಾಗ ನನ್ನ ಮಗಳ ಹೆಬ್ಬೆರಳು ತುಂಡಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಡೇ ಕೇರ್ ಸೆಂಟರ್‌ನಲ್ಲಿದ್ದ ಇನ್ನೊಂದು ಮಗು ಬಾಗಿಲು ಹಾಕುವಾಗ ಬಾಗಿಲು ಸಂದಿಗೆ ಮೈರಾಳ ಬೆರಳು ಸಿಕ್ಕಿಹಾಕಿಕೊಂಡಿದೆ ಎಂದು ಡೇ ಕೇರ್ ಸೆಂಟರ್ ನವರು ಹೇಳಿರುವುದಾಗಿ ಶಿವಾನಿ ಶರ್ಮಾ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ನನ್ನ ಪಾಪುವನ್ನು ಆ ಅವಸ್ಥೆಯಲ್ಲಿ ನಾನು ಹೇಗೆ ನೋಡಲಿ? ಹೆಬ್ಬರಳಿನ ತುದಿ ತುಂಡಾಗಿದ್ದು, ಆ ಗಾಯವನ್ನು ಗುಣಪಡಿಸಬಹುದಷ್ಟೇ ಬೇರೇನು ಮಾಡಲು ಸಾಧ್ಯವಿಲ್ಲ ಎಂದು ಪ್ಲಾಸ್ಟಿಕ್ ಸರ್ಜನ್ ಹೇಳಿದ್ದಾರೆ. ಇನ್ನು ಮುಂದೆ ನನ್ನ ಮಗಳು ಜೀವನ ಪೂರ್ತಿ ತುಂಡಾದ ಹೆಬ್ಬರಳಿಟ್ಟುಕೊಂಡೇ ಬದುಕು ಸಾಗಿಸಬೇಕು. 
ಮೇ 1 ರಂದು ಡೇ ಕೇರ್ ಸೆಂಟರ್‌ನ ಮಾಲೀಕರು ಬಂದು ಕ್ಷಮೆಯಾಚಿಸಿ, ಮಗುವಿನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದರು. ಆದರೆ ಅನಂತರ ಅವರು ನಮ್ಮತ್ತ ತಿರುಗಿಯೂ ನೋಡಲಿಲ್ಲ.
ಮಗುವಿನ ಎರಡನೇ ಸರ್ಜರಿಯ ವೆಚ್ಚ ಭರಿಸುವಂತೆ ನಾವು ಕೇಳಿದಾಗ ಅವರು ನಮ್ಮ ಮಾತಿಗೆ ಪ್ರತಿಕ್ರಿಯಿಸಿಲ್ಲ. ಫೋನ್ ಮಾಡಿದರೆ ಉತ್ತರಿಸಲಿಲ್ಲ, ಅಷ್ಟೇ ಅಲ್ಲದ ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಕೆಯನ್ನೊಡ್ಡಿದ್ದಾರೆ.
ಇವರೆಲ್ಲವೂ ಹೃದಯಹೀನರು, ಇವರಿಗೆ ಕಾನೂನು, ಸಮಾಜ ಅಷ್ಟೇ ಯಾಕೆ ದೇವರ ಮೇಲೂ ಭಯವಿಲ್ಲ.
ಆ ಪೋಸ್ಟ್ ಹಾಕಿದ ನಂತರ ಡೇ ಕೇರ್ ಮಾಲೀಕರು ಫೇಸ್‌ಬುಕ್ ನಿಂದ ತಮ್ಮ ಅಕೌಂಟ್‌ನ್ನು ಡಿಲೀಟ್ ಮಾಡಿದ್ದಾರೆ. ಆದಾಗ್ಯೂ, ಡೇ ಕೇರ್ ಸೆಂಟರ್ ಬಗ್ಗೆ ಹೆತ್ತವರು ಜಾಗೃತರಾಗಬೇಕೆಂದು ಶಿವಾನಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com