
ಜೈಪುರ: ಭಾರತದ ಮೊದಲ ಪ್ರಧಾನಿ ಜವಹರಲಾಲ ನೆಹರೂರವರ ಉಲ್ಲೇಖಗಳನ್ನು ರಾಜಸ್ತಾನ ಸರ್ಕಾರದ ಏಳನೇ ತರಗತಿ ಪಠ್ಯಪುಸ್ತಕದಿಂದ ತೆಗೆದುಹಾಕಲಾಗಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ರಾಜ್ಯ ಶಿಕ್ಷಣ ಸಚಿವ ವಸುದೇವ ದೇವನಾನಿ, ಪರಿಷ್ಕೃತ ಪಠ್ಯಪುಸ್ತಕಗಳ ಪಾಠಗಳಲ್ಲಿ ನೆಹರೂರವರ ಹೆಸರು 15 ಕಡೆಗಳಲ್ಲಿ ಇವೆ ಎಂದು ಹೇಳಿದ್ದಾರೆ.
ಪಠ್ಯಪುಸ್ತಕದಿಂದ ನೆಹರೂರವರ ಹೆಸರುಗಳನ್ನು ತೆಗೆದುಹಾಕಿಲ್ಲ. ಅವರ ಉಲ್ಲೇಖಗಳು 7ನೇ ತರಗತಿ ಹಿಂದಿ ಪಠ್ಯಪುಸ್ತಕ,9ನೇ ಕ್ಲಾಸ್ ಸಮಾಜ ವಿಜ್ಞಾನ ಮತ್ತು 11ನೇ ತರಗತಿಯ ಇತಿಹಾಸ ಪುಸ್ತಕಗಳಲ್ಲಿ ಇವೆ ಎಂದು ದೇವನಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಅಲಿಪ್ತ ಚಳುವಳಿಯಲ್ಲಿ ನೆಹರೂರವರ ಪಾತ್ರದ ಬಗ್ಗೆ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸ್ಥಳಾವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರ ಶಿಕ್ಷಣದಲ್ಲಿ ರಾಜಕೀಯ ತರುವುದಿಲ್ಲ. 1ರಿಂದ 8ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ತಯಾರು ಮಾಡಿದೆ. ಹಾಗೂ 9ರಿಂದ 12ನೇ ತರಗತಿವರೆಗಿನ ಸಿಲೆಬಸ್ ಗಳನ್ನು ಪ್ರೌಢ ಶಿಕ್ಷಣ ಮಂಡಳಿ ತಯಾರಿಸಿದೆ ಎಂದರು.
ಜವಹರಲಾಲ್ ನೆಹರೂರವರಿಗೆ ಸಂಬಂಧಪಟ್ಟ ವಿಷಯಗಳನ್ನು ಎರಡು, ಮೂರು ಪಠ್ಯಗಳಲ್ಲಿ ಸೇರಿಸದಿದ್ದರೆ ಅವುಗಳನ್ನು ಪೂರಕ ರೂಪದಲ್ಲಿ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗುವುದು ಎಂದು ಹೇಳಿದರು.
ಈ ಮುನ್ನ, ಜವಹರಲಾಲ್ ನೆಹರೂರವರ ಉಲ್ಲೇಖಗಳನ್ನು ಪಠ್ಯಪುಸ್ತಕದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಚಿನ್ ಪೈಲಟ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಜೈಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ವಸುಂಧರ ರಾಜೆ ಸರ್ಕಾರದ ಮಾನಸಿಕ ದಿವಾಳಿತನವನ್ನು ಈ ಕ್ರಮ ಪ್ರತಿಫಲಿಸುತ್ತದೆ ಎಂದು ಹೇಳಿದ್ದರು.
Advertisement