
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಯನ್ನು ಇಸೀಸ್ ಉಗ್ರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ. ರಾಷ್ಟ್ರೀಯತೆ ವಿಚಾರವಾಗಿ ಜೆಎನ್ ಯು ವಿವಿಯಲ್ಲಿ ಉಂಟಾಗಿದ್ದ ವಿವಾದ ಹಾಗೂ ಜೆಎನ್ ಯು ವಿವಿಯ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ವಿರುದ್ಧ ಕೇಳಿಬಂದಿದ್ದ ದೇಶವಿರೋಧಿ ಘೋಷಣೆ ಕೂಗಿದ್ದ ಆರೋಪ ಪ್ರಕರಣದ ಲಾಭ ಪಡೆಯುವಂತೆ ಇಸೀಸ್ ಉಗ್ರರು ಭಾರತದಲ್ಲಿ ನೇಮಕ ಮಾಡಿಕೊಂಡಿದ್ದ ಉಗ್ರರಿಗೆ ಸೂಚನೆ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗವಾಗಿದೆ.
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, ದೇಶವಿರೋಧಿ ಘೋಷಣೆ ಪ್ರಕರಣ ಹಾಗೂ ಕನ್ಹಯ್ಯ ಕುಮಾರ್ ಬಂಧನವನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಸೇರಿಕೊಂಡು ವಾಹನಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ಹಲವು ವಿಧ್ವಂಸಕ ಕೃತ ನಡೆಸಲು ಇಸೀಸ್ ನ ಅಹ್ಮದ್ ಅಲಿ 19 ವರ್ಷದ ಆಶಿಕ್ ಅಹ್ಮದ್ ಅಲಿಯಾಸ್ ಪಶ್ಚಿಮ ಬಂಗಾಳದ ಹೂಗ್ಲಿಯ ರಾಜಾ ಎಂಬುವವನಿಗೆ ನಿರ್ದೇಶನ ನೀಡಿದ್ದ.
ಭಾರತದಲ್ಲಿ ಇಸೀಸ್ ಉಗ್ರ ಸಂಘಟನೆ ಪರವಾಗಿ ಕಾರ್ಯನಿರ್ವಹಿಸಲು ನೇಮಕಗೊಂಡಿದ್ದ ಮೂವರು ಉಗ್ರರ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಹೊರಬಂದಿದೆ. ಕನ್ಹಯ್ಯ ಕುಮಾರ್ ವಿವಾದದಲ್ಲಿ ಸೇರಿಕೊಂಡು ವಿದ್ಯಾರ್ಥಿಗಳ ಮೂಲಕವೇ ದೇಶದಲ್ಲಿ ಮತ್ತಷ್ಟು ಅಸ್ಥಿರತೆ ಉಂಟು ಮಾಡುವುದು ಇಸೀಸ್ ನ ಉದ್ದೇಶವಾಗಿತ್ತು ಎಂದು ಎನ್ಐಎ ತಿಳಿಸಿದೆ. ಈ ಬಗ್ಗೆ ಉಗ್ರರು ನೀಡಿರುವ ಹೇಳಿಕೆ ಪ್ರತಿಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟ ಮಾಡಿದ್ದು ಇದೆ ಮೊದಲ ಬಾರಿಗೆ ಇಸೀಸ್ ಬಗ್ಗೆ ಭಾರತೀಯ ಉಗ್ರರಿಂದ ತನಿಖಾ ಸಂಸ್ಥೆಯೊಂದು ಹೇಳಿಕೆ ದಾಖಲಿಸಿಕೊಂಡಿದೆ.
ಇತ್ತೀಚೆಗಷ್ಟೇ ಅಮೆರಿಕ ನಡೆಸಿದ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟಿದ್ದ ಶಫಿ ಅರ್ಮಾರ್ ವಿದ್ಯಾರ್ಥಿ ಚಳುವಳಿಯ ಲಾಭ ಪಡೆದು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಭಾರತೀಯ ಉಗ್ರರಿಗೆ ನಿರ್ದೇಶನ ನೀಡಿದ್ದ ಎನ್ನಲಾಗಿದೆ.
Advertisement