ಪ್ರಧಾನಿ ಮೋದಿ ಸರ್ಕಾರದಿಂದ ಕೋಮು ಸೌಹಾರ್ದತೆಗಾಗಿಯೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ?

ಕೇಂದ್ರ ಸರ್ಕಾರ ಈಗ ದೇಶದಲ್ಲಿ ಕೋಮು ಸೌಹಾರ್ದತೆ ಉತ್ತೇಜಿಸುವುದಕ್ಕಾಗಿಯೆ ಪ್ರತ್ಯೇಕ ಸಚಿವಾಲಯವೊಂದನ್ನು ಸ್ಥಾಪನೆ ಮಾಡಲು ಚಿಂತನೆ ನಡೆಸಿದೆ.
ಪ್ರಧಾನಿ ಮೋದಿ ಸರ್ಕಾರದಿಂದ ಕೋಮು ಸೌಹಾರ್ದತೆಗಾಗಿಯೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ?

ನವದೆಹಲಿ: ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾದಂತಹ  ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರ, ಈಗ ದೇಶದಲ್ಲಿ ಕೋಮು ಸೌಹಾರ್ದತೆ ಉತ್ತೇಜಿಸುವುದಕ್ಕಾಗಿಯೆ ಪ್ರತ್ಯೇಕ ಸಚಿವಾಲಯವೊಂದನ್ನು ಸ್ಥಾಪನೆ ಮಾಡಲು ಚಿಂತನೆ ನಡೆಸಿದೆ.

ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡುವುದಕ್ಕಾಗಿಯೇ ಪ್ರತ್ಯೇಕವಾದ ಖಾತೆ ಪ್ರಾರಂಭಿಸುವ ಪ್ರಸ್ತಾವನೆಯನ್ನು ಪ್ರಧಾನಿ ಕಾರ್ಯಾಲಯ ಪರಿಗಣಿಸಿದ್ದು, ಈ ಸಚಿವಾಲಯ ಪ್ರಧಾನಿ ಕಾರ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಈಗಿರುವ ಮಾಹತಿ ಪ್ರಕಾರ ಹೊಸ ಸಚಿವಾಲಯ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದು ಕೋಮುಸೌಹಾರ್ದ ವಿಷಯದಲ್ಲಿ ಸಮಸ್ಯೆ ಎದುರಾದಾಗ ಅದನು ನಿಭಾಯಿಸಲು ಹಾಗೂ ಕೋಮು ಸೌಹಾರ್ದತೆಯನ್ನು ಉತ್ತೇಜಿಸಲು ಅದರದ್ದೇ ಆದ ಅಧಿಕಾರಿಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ದೇಶದ ಅಭಿವೃದ್ಧಿ ವಿಷಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಪ್ರಮುಖ ಪಾತ್ರ ವಹಿಸಲಿದೆ ಎಂಬುದರ ಬಗ್ಗೆ ಪ್ರಧಾನಿ ಮೋದಿಗೆ ಅರಿವಿದ್ದು, ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಲು ಚಿಂತನೆ ನಡೆಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿದೆ. ಹೊಸ ಆಲೋಚನೆಗಳ ಬಗ್ಗೆ ಸಲಹೆ ನೀಡುವ ಹಲವು ಜನರನ್ನು ಪ್ರಧಾನಿ ಮೋದಿ ಭೇಟಿ ಮಾಡುತ್ತಿರುತ್ತಾರೆ. ಪ್ರತ್ಯೇಕ ಸಚಿವಾಲಯ ಪ್ರಾರಂಭಿಸುವ ಸಲಹೆ ಸಹ ಪ್ರಧಾನಿಯವರನ್ನು ಭೇಟಿ ಮಾಡುವವರೇ ನೀಡಿರುವ ಸಲಹೆ ಎಂದು ಹೇಳಲಾಗಿದೆ.

ಕಳೆದ ತಿಂಗಳು ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯ ಪ್ರದೇಶ ಸರ್ಕಾರ ಹ್ಯಾಪಿನೆಸ್ ಡಿಪಾರ್ಟ್ಮೆಂಟ್ ಎಂಬ ಇಲಾಖೆಯನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು. ಕೇಂದ್ರ ಸರ್ಕಾರ ಕೋಮು ಸೌಹಾರ್ದತೆಗಾಗಿ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿದರೆ ಇದೇ ಮಾದರಿಯ ಕ್ರಮವನ್ನು ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ಜಾರಿಗೆ ತರಲಿವೆ ಎಂದು ನಿರೀಕ್ಷಿಸಲಾಗಿದೆ. ಅಕ್ಟೊಬರ್ 2 ಮಹಾತ್ಮಾ ಗಾಂಧಿ ಜಯಂತಿ ವೇಳೆಗೆ ಹೊಸ ಸಚಿವಾಲಯ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com