
ನವದೆಹಲಿ: ದೇಶದ ನ್ಯಾಯಾಂಗ ತನ್ನ ಕಾರ್ಯವ್ಯಾಪ್ತಿಯ ಎಲ್ಲೆ ಮೀರಿ ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ನ್ಯಾಯಾಂಗ ತನಗೆ ತಾನೇ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು, ಕಾರ್ಯಾಂಗದ ವ್ಯಾಪ್ತಿಗೆ ಬರುವ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಅವರು ಇಂದು ದೆಹಲಿಯಲ್ಲಿ ಭಾರತೀಯ ಮಹಿಳಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನ್ಯಾಯಂಗವು ತನ್ನ ಇತಿಮಿತಿಯಲ್ಲಿ ಕಾರ್ಯಂಗದೊಂದಿಗೆ ಕೆಲಸ ಮಾಡಬೇಕು ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಹೆಸರಿನಲ್ಲಿ ಮೂಲ ರಚನೆಯ ಅಂಶಗಳೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.
ನ್ಯಾಯ ವಿಮರ್ಶೆ ಮಾಡುವುದು ನ್ಯಾಯಾಂಗದ ಕೆಲಸವಾದರೂ ಕೂಡ ಅದರಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳು ತಮ್ಮಷ್ಟಕ್ಕೆ ಕಾರ್ಯವ್ಯಾಪ್ತಿಯ ಕುರಿತು ಲಕ್ಷ್ಮಣರೇಖೆ ಹಾಕಿಕೊಳ್ಳಬೇಕು. ಲಕ್ಷ್ಮಣ ರೇಖೆ ಬಹುಮುಖ್ಯ ಎಂದು ಅವರು ಹೇಳಿದರು. ಕಾರ್ಯಾಂಗದ ನಿರ್ಧಾರಗಳನ್ನು ಕಾರ್ಯಾಂಗವೇ ತೆಗೆದುಕೊಳ್ಳುತ್ತದೆಯೇ ಹೊರತು ನ್ಯಾಯಾಂಗವಲ್ಲ ಎಂದರು.
ಕಾರ್ಯಾಂಗವು ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಹಲವು ವಿಷಯಗಳನ್ನು ಅವಲಂಬಿಸಿರುತ್ತದೆ ಮತ್ತು ತೆಗೆದುಕೊಂಡ ನಿರ್ಧಾರಗಳಿಗೆ ಅದುವೇ ಹೊಣೆಯಾಗಿರುತ್ತದೆ. ಅದು ತೆಗೆದುಕೊಂಡ ನಿರ್ಧಾರಗಳು ತಪ್ಪಾದರೆ ಜನರು ಸರ್ಕಾರವನ್ನು ಮತ ಹಾಕುವ ಮೂಲಕ ಬದಲಾವಣೆ ಮಾಡಬಹುದು ಎಂದು ತಿಳಿಸಿದರು.
ಕಾರ್ಯಾಂಗ ತೆಗೆದುಕೊಂಡ ನಿರ್ಧಾರಗಳು ಅಸಂವಿಧಾನಿಕ ಎನಿಸಿದರೆ ನ್ಯಾಯಾಲಯ ಅದನ್ನು ತೆಗೆದುಹಾಕಬಹುದು. ಆದರೆ ಕಾರ್ಯಾಂಗ ತೆಗೆದುಕೊಳ್ಳುವ ನಿರ್ಧಾರಗಳನ್ನು ನ್ಯಾಯಾಂಗ ತೆಗೆದುಕೊಂಡರೆ ಈ ಆಯ್ಕೆ ಸಿಗುವುದಿಲ್ಲ. ಕಾರ್ಯಾಂಗಕ್ಕೆ ನ್ಯಾಯಾಂಗ ಬದಲಿ ಅಲ್ಲ ಎನ್ನುತ್ತಾರೆ ಜೇಟ್ಲಿ.
ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ನ್ಯಾಯಾಂಗ ಅತಿಕ್ರಮಿಸುತ್ತದೆ ಎಂದು ಈ ಹಿಂದೆ ಅರುಣ್ ಜೇಟ್ಲಿಯವರು ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ ಕೇಳಲಾದ ಪ್ರಶ್ನೆಗೆ ಇಂದು ಜೇಟ್ಲಿ ಈ ಮೇಲಿನಂತೆ ವಿವರಣೆ ನೀಡಿದರು.
Advertisement