ಪುರಿ ಜಗನ್ನಾಥ ದೇವಾಲಯ ಯಾವ ಗಳಿಗೆಯಲ್ಲಿಯೂ ಕುಸಿದು ಬೀಳಬಹುದು: ಪುರಾತತ್ವ ಇಲಾಖೆ ಎಚ್ಚರಿಕೆ

ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಯಾವ ಕ್ಷಣದಲ್ಲಿಯಾದರೂ ಕುಸಿದು ಬೀಳಬಹುದು ಎಂದು ಭಾರತದ ಪುರಾತತ್ವ ...
ಒಡಿಶ್ಶಾ ಪುರಿ ದೇವಾಲಯ
ಒಡಿಶ್ಶಾ ಪುರಿ ದೇವಾಲಯ

ಭುವನೇಶ್ವರ: ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಯಾವ ಕ್ಷಣದಲ್ಲಿಯಾದರೂ ಕುಸಿದು ಬೀಳಬಹುದು ಎಂದು ಭಾರತದ ಪುರಾತತ್ವ ಸಂಸ್ಥೆ ಎಚ್ಚರಿಕೆ ನೀಡಿದೆ.

ಪುರಾತತ್ವ ಇಲಾಖೆಯ ತಾಂತ್ರಿಕ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಿಸಿ ಮಿತ್ರಾ, ಈ ಎಚ್ಚರಿಕೆಯ ಗಂಟೆಯನ್ನು ನೀಡಿದ್ದು, ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪುರಿ ಜಗನ್ನಾಥ ಸ್ವಾಮಿ ದೇವಾಲಯ ಕುಸಿದು ಬೀಳಬಹುದು ಎಂದು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಮುನ್ನ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ದೇವಾಲಯದ ಕಟ್ಟಡ ಸುರಕ್ಷತೆ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.ದೇವಾಲಯದಲ್ಲಿ ಪುರಾತತ್ವ ಇಲಾಖೆ ದುರಸ್ತಿ ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ನಿನ್ನೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಮಹೇಶ್ ಶರ್ಮ ಮತ್ತು ಪುರಾತತ್ವ ಇಲಾಖೆಯ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳು ಸಭೆ ಸೇರಿ ದೇವಾಲಯದ ದುರಸ್ತಿ ಕಾರ್ಯ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ ಮಹೇಶ್ ಶರ್ಮಾ, ತಾಂತ್ರಿಕ ಕಾರಣಗಳಿಂದ ದೇವಾಲಯದ ದುರಸ್ತಿ ಕೆಲಸ ವಿಳಂಬವಾಗುತ್ತಿದೆ ಎಂದು ಹೇಳಿದ್ದರು.

ದೇವಾಲಯದ ದುರಸ್ತಿ ಕೆಲಸ ಮಾಡಿಸಲು ಹಣದ ಕೊರತೆಯಿಲ್ಲ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದರು. ಪುರಿ ಜಗನ್ನಾಥ ದೇವಾಲಯದ ರಚನೆಯ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಾಂಸ್ಕೃತಿಕ ಕಾರ್ಯದರ್ಶಿ ನೇತೃತ್ವದ ನಿಯೋಗವನ್ನು ಕಳುಹಿಸಿಕೊಡಲಾಗುವುದು ಎಂದು ಕೂಡ ಅವರು ತಿಳಿಸಿದರು.

ನಗರದ ಹೃದಯ ಭಾಗದಲ್ಲಿ ವಿಶಾಲವಾದ ವೇದಿಕೆಯಡಿ ಪುರಿ ಜಗನ್ನಾಥ ದೇವಾಲಯವನ್ನು ನಿರ್ಮಿಸಿದ್ದು, 7 ಮೀಟರ್ ಎತ್ತರದ ಗೋಡೆಯನ್ನು ಅದಕ್ಕೆ ಹೊಂದುವಂತೆ ನಿರ್ಮಿಸಲಾಗಿದೆ. ಜಗನ್ನಾಥ ದೇವಾಲಯದ ವಿಸ್ತೀರ್ಣ 4 ಲಕ್ಷದ 20 ಸಾವಿರ ಚದರಡಿ. ಭಾರತದ 4 ಧಾಮಗಳಲ್ಲಿ ಒಡಿಶ್ಶಾದ ಪುರಿ ಜಗನ್ನಾಥ ದೇವಾಲಯ ಕೂಡ ಒಂದಾಗಿದ್ದು ಯಾತ್ರಾರ್ಥಿಗಳ ಪವಿತ್ರ ತಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com