ನವದೆಹಲಿ: ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಬಾಂಬೆ ಹೈಕೋರ್ಟ್ ಗೆ ಆದೇಶಿಸಿದೆ.
ಹೈಕೋರ್ಟ್ ಸರ್ಕಾರಿ ವಿಶೇಷ ಅಭಿಯೋಜಕರ ಅನುಪಸ್ಥಿತಿಯಲ್ಲಿ ಪ್ರಕರಣ ವಿಚಾರಣೆ ನಡೆಸುತ್ತಿದೆ ಎಂದು ಆರೋಪಿಸಿ ಜಿಯಾ ಖಾನ್ ಅವರ ತಾಯಿ ರಬಿಯಾ ಅಮಿನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ಕುರಿತು ಸಿಬಿಐ ನಡೆಸುತ್ತಿರುವ ಮಂದಗತಿಯ ತನಿಖೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣವನ್ನು ವಹಿಸಿಕೊಂಡು ಎರಡು ವರ್ಷಗಳೇ ಕಳೆದಿದೆ. ಆದರೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಕೋರ್ಟ್ಗೆ ನೀಡಲು ವಿಫಲವಾಗಿರುವುದು ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಸಿಬಿಐಗೆ ಛಾಟಿ ಬೀಸಿರುವ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಹೈಕೋರ್ಟ್ ಗೆ ಸೂಚಿಸಿದೆ.
2014ರಲ್ಲೇ ಈ ಪ್ರಕರಣವನ್ನು ಬಾಂಬೆ ಹೈಕೋರ್ಟ್ ವಿಶೇಷ ತನಿಖಾದಳಕ್ಕೆ ವಹಿಸಿತ್ತು. ಜಿಯಾ ಅವರ ತಾಯಿ ರಬಿಯಾ ಅಮಿನ್ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದು, ಪ್ರಕರಣದಲ್ಲಿ ಜಿಯಾ ಖಾನ್ ಸ್ನೇಹಿತ ಸೂರಜ್ ಪಂಚೋಲಿ ಪಾತ್ರದ ಕುರಿತು ಶಂಕಿಸಿದ್ದ ನ್ಯಾಯಾಲಯ 20 ದಿನಗಳ ಬಂಧನ ವಿಧಿಸಿತ್ತು.
ಗಜನಿ, ಹೌಸ್ಫುಲ್ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲಲ್ಲಿ ಅಭಿನಯಿಸಿದ್ದ ಜಿಯಾ ಖಾನ್ ಜೂನ್ 3, 2013ರಂದು ಮುಂಬೈಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.