
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡು ವರ್ಷ ಪೂರೈಸಿರುವುದರ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ಲೇಖನ ಬರೆದಿದ್ದು, ಮೂರನೇ ವರ್ಷದಲ್ಲಿ ಕೇಂದ್ರ ಸರ್ಕಾರ ಪ್ರಮುಖ ಮಸೂದೆಗಳನ್ನು ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರದ ಎರಡು ವರ್ಷಗಳನ್ನು ಸ್ಲಾಗ್ ಓವರ್ ಗೆ ಹೋಲಿಸಿರುವ ಅರುಣ್ ಜೇಟ್ಲಿ, ಅಧಿಕಾರದ ಅವಧಿಯ ಮಧ್ಯಭಾಗವನ್ನು ಪ್ರವೇಶಿಸುವ ಯಾವುದೇ ಸರ್ಕಾರ ಭವಿಷ್ಯತ್ ನ ಬಗ್ಗೆ ತನ್ನ ಮಾರ್ಗಸೂಚಿಯನ್ನು ಜಾರಿಗೆ ತರುವುದು ಸಾಮಾನ್ಯ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಹ ಅಧಿಕಾರದ ಮಧ್ಯಭಾಗವನ್ನು ಪ್ರವೇಶಿಸುತ್ತಿದ್ದು, ಮೂರನೆ ವರ್ಷದ ಅವಧಿಯಲ್ಲಿ ಪ್ರಮುಖ ಕಾನೂನುಗಳನ್ನು ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ಯುಪಿಎ ಸರ್ಕಾರದ ಅವಧಿಯನ್ನು ನಿಷ್ಕ್ರಿಯವಾದ ನೀತಿಗಳ ಅವಧಿಯೆಂದೇ ಪರಿಗಣಿಸಲಾಗಿತ್ತು. ಆದ್ದರಿಂದ ವಿದೇಶಿ ಹೂಡಿಕೆದಾರರು, ಹಾಗೂ ದೇಶಿ ಹೂಡಿಕೆದಾರರಿಗೆ ಭಾರತ ಆದ್ಯತೆಯ ಆಯ್ಕೆಯಾಗಿರಲಿಲ್ಲ. ಸರ್ಕಾರದ ಹಗರಣಗಳಿಂದ ಆಡಳಿತ ವ್ಯವಸ್ಥೆಯ ಬಗೆಗಿನ ವಿಶ್ವಾಸಾರ್ಹತೆ ಕುಗ್ಗಿತ್ತು. ಆದರೆ 2014 ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಆಡಳಿತಕ್ಕೆ ಬಂದ ನಂತರ ಆಡಳಿತ ವ್ಯವಸ್ಥೆಯ ಬಗ್ಗೆ ವಿಶ್ವಾಸಾರ್ಹತೆ ಮೂಡಿದೆ ಎಂದು ಅರುಣ್ ಜೇಟ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂಡ ಬದಲಾದ ರಾಜಕೀಯ ಹಾಗೂ ಬದಲಾವಣೆಯಾದ ಆಡಳಿತ ವ್ಯವಸ್ಥೆಯಿಂದ ಕೂಡಿದ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಧ್ಯವರ್ತಿಗಳು ನಿರುದ್ಯೋಗಿಗಳಾಗಿದ್ದಾರೆ. ಕಡತಗಳು ಶೀಘ್ರವಾಗಿ ವಿಲೇವಾರಿಯಾಗುತ್ತಿವೆ. ನಿಷ್ಕ್ರಿಯ ನೀತಿಗಳಿಂದ ಭಾರತ ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ ಎಂದು ಅರುಣ್ ಜೇಟ್ಲಿ ಲೇಖನದಲ್ಲಿ ಹೇಳಿದ್ದಾರೆ.
Advertisement