
ಚಂಡೀಗಢ: ಪಠಾಣ್ ಕೋಟ್ ದಾಳಿ ನಡೆದ ಬೆನ್ನಲ್ಲೇ ಪಂಜಾಬ್ ನಲ್ಲಿ ಮತ್ತೊಂದು ಉಗ್ರ ಕೃತ್ಯ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಪಂಜಾಬ್ ಮೇಲೆ ಖಾಲಿಸ್ತಾನ ಪರ ಇರುವ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದೆ.
ಕೆನಡಾದಲ್ಲಿರುವ ಬ್ರಿಟೀಷ್ ಕೊಲಂಬಿಯಾದ ಮಿಷನ್ ಸಿಟಿಯಲ್ಲಿ ಖಾಲಿಸ್ತಾನ ಪರ ಇರುವ ಉಗ್ರ ಸಂಘಟನೆಗಳು ಕ್ಯಾಂಪ್ ನಡೆಸುತ್ತಿದ್ದು, ಪಂಜಾಬ್ ಮೇಲೆ ದಾಳಿ ನಡೆಸಲು ಈ ಕ್ಯಾಂಪ್ ನಲ್ಲಿ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಪಂಜಾಬ್ ನ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೆನಡಾದಲ್ಲಿರುವ ಸಿಖ್ ಸಮುದಾಯದ ಹರ್ದೀಪ್ ನಿಜ್ಜರ್ ಖಾಲಿಸ್ತಾನ ಟೆರರ್ ಫೋರ್ಸ್( ಕೆಟಿಎಫ್) ನ ಮುಖ್ಯಸ್ಥನಾಗಿದ್ದು, ಪಂಜಾಬ್ ಮೇಲೆ ದಾಳಿ ನಡೆಸಲು ಸಿಖ್ ಯುವಕರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ಪಂಜಾಬ್ ಸರ್ಕಾರ ವಿಸ್ತೃತ ವರದಿಯನ್ನು ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಗೃಹ ಸಚಿವಾಲಯಕ್ಕೆ ರವಾನೆ ಮಾಡಿ ಹರ್ದೀಪ್ ನನ್ನು ಗಡಿಪಾರು ಮಾಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಪಂಜಾಬ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಹರ್ದೀಪ್ ನಿಜ್ಜರ್, 2007 ರಲ್ಲಿ ಸಂಭವಿಸಿದ್ದ ಶಿಂಗಾರ್ ಸಿನಿಮಾ ಸ್ಫೋಟ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾದ ಉಗ್ರನಾಗಿದ್ದಾನೆ.
Advertisement