ಡಿಆರ್ ಡಿಒದಲ್ಲಿ ಅಧಿಕಾರಿಗೆ ಕಿರುಕುಳ: ತನಿಖೆಗೆ ಆದೇಶಿಸಿದ ಪರಿಕ್ಕರ್

ಕಿರುಕುಳಕ್ಕೆ ಒಳಗಾದ ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ (ಡಿಆರ್'ಡಿಓ) ಅಧಿಕಾರಿಗೆ ಪೂರ್ಣ...
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
ನವದೆಹಲಿ: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ (ಡಿಆರ್'ಡಿಓ) ನಿವೃತ್ತ ಅಧಿಕಾರಿಗೆ ಪೂರ್ಣ ರಕ್ಷಣೆ ನೀಡುವುದಾಗಿ ಹೇಳಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಡಿಆರ್ ಡಿಓದಲ್ಲಿ ನಡೆದಿದೆ ಎನ್ನಲಾದ ಕಿರುಕುಳ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಆದೇಶಿದ್ದಾರೆ. 
ಡಿಆರ್ ಡಿಓ ಅಧಿಕಾರಿ ಪ್ರಕಾಶ್ ಸಿಂಗ್(53) ಅವರನ್ನು ಸಾರ್ವಕಾಲಿಕ ತೊಂದರೆಗಾರ ಎಂದು ಹೇಳಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಆದರೆ, ನಿಜ ಸಂಗತಿಯೆಂದರೆ, ದೇಶದ ರಕ್ಷಣಾ ಸಂಶೋಧನೆ ಏಜೆನ್ಸಿಗೆ ನೇಮಕಾತಿ ವೇಳೆ ದುಷ್ಕೃತ್ಯ ಮತ್ತು ಆರ್ಥಿಕ ಅಕ್ರಮ ನಡೆದಿರುವ ಬಗ್ಗೆ ಪ್ರಕಾಶ್ ಸಿಂಗ್ ದನಿ ಎತ್ತಿದ್ದರು. ಅಲ್ಲದೇ ಈ ಸಂಬಂಧ ನಿರಂತರವಾಗಿ ದೂರು ನೀಡುತ್ತಿದ್ದ ಹಿನ್ನಲೆಯಲ್ಲಿ ಅವರನ್ನು 2012ರಲ್ಲಿ ಕಡ್ಡಾಯ ನಿವೃತ್ತಿಗೊಳಿಸಲಾಗಿತ್ತು.
ಈ ಸಂಬಂಧ ಅಂದಿನ ರಕ್ಷಣಾ ಸಚಿವ ಎ ಕೆ ಆಂಟೋನಿ ಅವರಿಗೆ ಪ್ರಕಾಶ್ ಸಿಂಗ್ ದೂರು ನೀಡಿದ್ದರು. ಆದರೆ ಏನು ಪ್ರಯೋಜನವಾಗಿರಲಿಲ್ಲ. ಕಳೆದ ವರ್ಷ ಮನೋಹರ್ ಪರಿಕ್ಕರ್ ಅವರಿಗೆ ಈ ಕುರಿತು ಸಿಂಗ್ ವಿವರ ಸಲ್ಲಿಸಿ ನ್ಯಾಯ ಕೋರಿದ್ದರು. ತಮಗೆ ಡಿಆರ್ ಡಿಓದಲ್ಲಿ ನೀಡಲಾದ ಕಿರುಕುಳದ ಬಗ್ಗೆ ವಿವರಿಸಿದ ಅವರು ತಮ್ಮನ್ನು ಕಡ್ಡಾಯ ನಿವೃತ್ತಿಗೊಳಿಸಲು 22 ಡಿಆರ್ ಡಿಓ ಅಧಿಕಾರಗಳೇ ಜವಾಬ್ದಾರರು ಎಂದು ಆರೋಪಿಸಿದ್ದರು. ತಕ್ಷಣ ಪರಿಕ್ಕರ್ ಅವರು ಸಿಂಗ್ ವಿರುದ್ಧ ನಿವೃತ್ತಿ ಆದೇಶದವನ್ನು ರದ್ದುಗೊಳಿಸುವಂತೆ ಸೂಚಿಸಿ, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. 
ಕೇಂದ್ರ ಜಾಗೃತ ಆಯೋಗದ ಸಲಹೆ ಮೇರೆಗೆ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕಾಶ್ ಸಿಂಗ್ ಅವರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ವಜಾಗೊಳಿಸಲು ಕಾರಣರಾದ ಅಧಿಕಾರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ, ಕಿರುಕುಳ ನೀಡಿದ ಅಧಿಕಾರಿಗಳ ಯಾರು ಎಂಬುದು ತನಿಖೆಯಿಂದ ತಿಳಿದು ಬರುತ್ತದೆ. ತದ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಿಕ್ಕರ್ ತಿಳಿಸಿದ್ದಾರೆ. 
ಡಿಆರ್ ಡಿಓ ಏಜೆನ್ಸಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಹಾಗೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 10 ವಿಜ್ಞಾನಿಗಳ ಸಂಬಂಧಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದ ಕುರಿತು ಸಿಂಗ್ ದೂರು ನೀಡಿದ್ದರು. ಈ ಬಗ್ಗೆ ಸಿಬಿಐ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com