ರಾಹುಲ್-ಸೋನಿಯಾ-ಪ್ರಿಯಾಂಕಾ ಗಾಂಧಿ(ಸಂಗ್ರಹ ಚಿತ್ರ)
ರಾಹುಲ್-ಸೋನಿಯಾ-ಪ್ರಿಯಾಂಕಾ ಗಾಂಧಿ(ಸಂಗ್ರಹ ಚಿತ್ರ)

ಸೋನಿಯಾಗೆ ವಯಸ್ಸಾಯ್ತು, ರಾಹುಲ್-ಪ್ರಿಯಾಂಕಾಗೆ ಅಧಿಕಾರ ನೀಡಲಿ: ಅಮರಿಂದರ್ ಸಿಂಗ್

ಹಲವು ರಾಜ್ಯಗಳ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮಹತ್ತರ ಬದಲಾವಣೆ ಮತ್ತು ಆತ್ಮಾವಲೋಕನಕ್ಕೆ ಸಾಮೂಹಿಕ ...

ನವದೆಹಲಿ: ಹಲವು ರಾಜ್ಯಗಳ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮಹತ್ತರ ಬದಲಾವಣೆ ಮತ್ತು ಆತ್ಮಾವಲೋಕನಕ್ಕೆ ಸಾಮೂಹಿಕ ಒತ್ತಾಯ ಕೇಳಿಬರುತ್ತಿದೆ. ಪಕ್ಷ ನಂಬಲರ್ಹ ಪ್ರಬಲ ಪಕ್ಷವಾಗಿ ಉಳಿಯಲು ಪಕ್ಷದಲ್ಲಿ ಬದಲಾವಣೆಯಾಗಲೇಬೇಕು ಎಂದು ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರು ಬಹಿರಂಗವಾಗಿ ಹೇಳಿದ್ದಾರೆ.

ಅಮೃತಸರ ಸಂಸದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಇತ್ತೀಚೆಗೆ ಇದೇ ಅಭಿಪ್ರಾಯವನ್ನು ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಅಧಿಕಾರವನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಬಿಟ್ಟುಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

''ನಾನು 1998ರಿಂದ ಸೋನಿಯಾ ಗಾಂಧಿಯವರ ಜೊತೆ ಕೆಲಸ ಮಾಡುತ್ತಿದ್ದೇನೆ. ಅವರೊಬ್ಬ ಉತ್ತಮ ನಾಯಕಿ. ಅವರಿಗೀಗ 70 ವರ್ಷವಾಗುತ್ತಾ ಬಂದಿದೆ, ನನಗೆ 74 ವರ್ಷ. ಹೊಸ ಪೀಳಿಗೆ ಹುಟ್ಟಿಕೊಳ್ಳಲು ಇದೀಗ ಸಮಯ ಬಂದಿದೆ. ಸೋನಿಯಾ ಗಾಂಧಿಯವರು ಕಠಿಣ ಶ್ರಮ ಹಾಕಿದ್ದಾರೆ. ಇಡೀ ದೇಶದಲ್ಲಿ ಕೆಲಸ ಮಾಡಿದ್ದಾರೆ. ಸಹಜವಾಗಿ ಅವರಿಗೀಗ ಸಾಕಾಗಿ ಹೋಗಿರುತ್ತದೆ, ಬಳಲಿದ್ದಾರೆ ಹಾಗಾಗಿ ಬದಲಾವಣೆ ಬೇಕಾಗಿದೆ. ಅವರು ತಮ್ಮ ಅಧಿಕಾರವನ್ನು ಬೇರೆಯವರಿಗೆ ಹಸ್ತಾಂತರಿಸಿದರೆ ಉತ್ತಮ ಎಂದು ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಅಮರಿಂದರ್ ಸಿಂಗ್ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಹುಲ್ ಗಾಂಧಿಯವರು ಪಕ್ಷದಲ್ಲಿ ತಮ್ಮದೇ ಆದ ಅನುಭವ ಗಳಿಸಿದ್ದಾರೆ. ಮತ್ತು ಪ್ರತಿಯೊಬ್ಬರೂ ಕಲಿಯುತ್ತಿದ್ದಾರೆ. ಎಲ್ಲರೂ ಹುಟ್ಟುತ್ತಲೇ ನಾಯಕರಾಗುವುದಿಲ್ಲ. ನಾವು ನಾಯಕರಾಗಿ ಬೆಳೆಯಬೇಕು. ರಾಹುಲ್ ಗಾಂಧಿಯವರು ಉತ್ತಮ ಕೇಳುಗಾರರಾಗಿದ್ದಾರೆ. ಗ್ರಹಿಸುವಿಕೆ ಅವರಲ್ಲಿ ಉತ್ತಮವಾಗಿದ್ದು, ವಿಷಯಗಳನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳುತ್ತಾರೆ. ಒಂದು ವಿಷಯ ಹೀಗೆಯೇ ಆಗಬೇಕೆಂದು ಅವರು ಹೇಳುವುದಿಲ್ಲ. ಮೊದಲು ಸರಿಯಾಗಿ ಕೇಳಿಸಿಕೊಂಡು ನಂತರ ಅದಕ್ಕೆ ಪರಿಹಾರ ಹುಡುಕುತ್ತಾರೆ. ಅವರು ಅವರ ತಂದೆ ರಾಜೀವ್ ಗಾಂಧಿ ತರಹ ಎಂದು ಸಿಂಗ್ ಶ್ಲಾಘಿಸಿದರು.

ಇದಕ್ಕೂ ಮುನ್ನ ಮೊನ್ನೆ 5 ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದ್ದ ಸಂದರ್ಭದಲ್ಲಿ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಸತ್ಯವೃತ ಚತುರ್ವೇದಿ ತಮ್ಮ ಅಭಿಪ್ರಾಯ ತಿಳಿಸಿ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆಯಾಗಬೇಕಿದೆ ಎಂದು ಹೇಳಿದ್ದರು.

Related Stories

No stories found.

Advertisement

X
Kannada Prabha
www.kannadaprabha.com