
ಚಂಡೀಗಢ: ಹರ್ಯಾಣದಲ್ಲಿ ಜಾಟ್ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿ ನಡೆಸಿದ ಬೃಹತ್ ಪ್ರತಿಭಟನೆಯ ವೇಳೆ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಪ್ರಕಾಶ್ ಸಿಂಗ್ ಸಮಿತಿ ವರದಿ ದೃಢಪಡಿಸಿದೆ.
ಜಾಟ್ ಸಮುದಾಯದ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಪ್ರಕಾಶ್ ಸಿಂಗ್ ಸಮಿತಿ ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದೆ. ಹಿಂಸಾಚಾರ ನಡೆದ ಸಂದರ್ಭದಲ್ಲಿ ಮುರ್ಥಾಲ್ ನಲ್ಲಿ ಹಲವು ಮಹಿಳೆಯರನ್ನು ಕಾರಿನಿಂದ ಹೊರಗೆಳೆದು ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಮುರ್ಥಾಲ್ ನಲ್ಲಿರುವ ಡಾಬಾದಲ್ಲಿ ಆಶ್ರಯ ನೀಡಲಾಯಿತು. ಈ ವೇಳೆ ಹಲವು ಮಹಿಳೆಯರ ವಸ್ತ್ರಗಳು ಸಹ ಹರಿದುಹೋಗಿದ್ದರಿಂದ ವಸ್ತ್ರಗಳನ್ನು ನೀಡಿ ಮನೆಗೆ ತಲುಪಿಸಲಾಯಿತು ಎಂದು ಡಾಬಾ ಮಾಲಿಕರ ಹೇಳಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸತತ 9 ದಿನಗಳು ನಡೆದ ಜಾಟ್ ಪ್ರತಿಭಟನೆಯ ಸಂದರ್ಭದಲ್ಲಿ 10 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿತ್ತು. ಅತ್ಯಾಚಾರ ಪ್ರಕರಣಗಳೂ ಸೇರಿದಂತೆ ಹಿಂಸಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಪ್ರಕಾಶ್ ಸಿಂಗ್ ಸಮಿತಿಯನ್ನು ರಚಿಸಲಾಗಿತ್ತು.
Advertisement