ಮಹಾಘಟ್ ಬಂಧನ್ ಅಥವಾ ಮೈತ್ರಿ ಕುರಿತು ನಿರ್ಧರಿಸಲಾಗುವುದು: ಅಖಿಲೇಶ್ ಯಾದವ್

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು ಲಕ್ನೋದಲ್ಲಿ ಕೆಂಪು ಬಣ್ಣದ ಮರ್ಸಿಡಿಸ್...
ರಥ ಯಾತ್ರೆ ಆರಂಭಕ್ಕೆ ಮುನ್ನ ಉತ್ತರ ಪ್ರದೇಶ ಜನರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್
ರಥ ಯಾತ್ರೆ ಆರಂಭಕ್ಕೆ ಮುನ್ನ ಉತ್ತರ ಪ್ರದೇಶ ಜನರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು ಲಕ್ನೋದಲ್ಲಿ ಕೆಂಪು ಬಣ್ಣದ ಮರ್ಸಿಡಿಸ್ ಬಸ್ ನಲ್ಲಿ ತಮ್ಮ ವಿಕಾಸ ರಥ ಯಾತ್ರೆಗೆ ಚಾಲನೆ ನೀಡಿ ಒಂದು ಕಿಲೋ ಮೀಟರ್ ದೂರ ಹೋಗುವಷ್ಟರಲ್ಲಿ ಹೈಟೆಕ್ ಬಸ್ಸು ಕೆಟ್ಟು ಹೋಯಿತು. ನಂತರ ಅದನ್ನು ರಿಪೇರಿ ಮಾಡಲಾಯಿತು. 
ಲಕ್ನೋದ ಖ್ಯಾತ ಲಾ ಮಾರ್ಟಿನಿಯರ್ ಸ್ಕೂಲ್ ನಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯಾತ್ರೆಗೆ ಚಾಲನೆ ನೀಡಿದರು. ಈ ಬಾರಿಯ ಉತ್ತರ ಪ್ರದೇಶ ಚುನಾವಣೆ ರಾಷ್ಟ್ರ ರಾಜಕೀಯವನ್ನು ಬದಲಾಯಿಸಲಿದೆ ಎಂದು ಹೇಳಿದರು.
ತಂದೆ ಮುಲಾಯಂ ಸಿಂಗ್ ಯಾದವ್ ಅವರು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಅಥವಾ ಮಹಾಘಟಬಂದನ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ನಾವು ರಾಜ್ಯದ ಜನತೆಯನ್ನು ತಳ ಮಟ್ಟದಲ್ಲಿ ತಲುಪಲು ಪ್ರಯತ್ನಿಸುತ್ತೇವೆ. ಸಮಾಜವಾದಿ ಪಕ್ಷ ಯಾವತ್ತಿಗೂ ಸಾರ್ವಜನಿಕ ಪರವಾಗಿ ಕೆಲಸ ಮಾಡುವುದರಿಂದ ನಮ್ಮನ್ನು ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅಖಿಲೇಶ್ ಹೇಳಿದರು. 
ಅಖಿಲೇಶ್ ಅವರ ರಥ ಯಾತ್ರೆಗೆ ಸಾಥ್ ನೀಡಿದ ಅವರ ಪತ್ನಿ ಡಿಂಪಲ್ ಯಾದವ್, ವಿಕಾಸ ರಥ ಯಾತ್ರೆ ಐತಿಹಾಸಿಕವಾಗಿ ಆರಂಭಗೊಂಡಿದೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದರು.
ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಅಖಿಲೇಶ್, ಮಾಜಿ ಸೇನಾ ಯೋಧರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುಃಖದ ಸಂಗತಿ. ಕೇಂದ್ರ ಸರ್ಕಾರ ದೇಶದ ಹಾದಿಯನ್ನು ಬೇರೆಡೆಗೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು. 
ನಮ್ಮ ದೇಶದ ಗಡಿ ಭಾಗಗಳಲ್ಲಿ ನಾಗರಿಕರನ್ನು ಕಾಯುವ ಯೋಧರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮನ್ನು ಯಾವ ತರಹದ ಜನರು ಆಳ್ವಿಕೆ ಮಾಡುತ್ತಿದ್ದಾರೆ ಎಂದು ಯೋಚಿಸಿ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದರು. 
ಕೆಂಪು ಬಣ್ಣದ ಮರ್ಸಿಡಿಸ್ ಬಸ್ಸಿನಲ್ಲಿ ತಮ್ಮ ಯಾತ್ರೆ ಆರಂಭಿಸಿದ ಅಖಿಲೇಶ್ ಗೆ ಲಕ್ಷಾಂತರ ಮಂದಿ ಯುವಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಮ್ ಬೋಲ್ತಾ ಹೈ(ಕೆಲಸ ಮಾತನಾಡುತ್ತದೆ) ಎಂಬುದು ಯಾತ್ರೆಯ ಘೋಷವಾಕ್ಯ. 
ಯಾತ್ರೆಯ ಮೊದಲ ಹಂತ ಇಂದು ಮುಕ್ತಾಯಗೊಳ್ಳಲಿದ್ದು ಮತ್ತೆ ನವೆಂಬರ್ 7ರಂದು ಪುನರಾರಂಭಗೊಳ್ಳಲಿದೆ. ಈ ಮಧ್ಯೆ ಸಮಾಜವಾದಿ ಪಕ್ಷದ ಬೆಳ್ಳಿಹಬ್ಬ ಸಮಾರಂಭ ನವೆಂಬರ್ 5ರಂದು ನಡೆಯಲಿದೆ.
ಬಸ್ಸು ಕೆಟ್ಟು ಹೋದ್ದರಿಂದ ನಂತರ ಅಖಿಲೇಶ್ ಯಾದವ್ ಕಾರಿನಲ್ಲಿ ತಮ್ಮ ಯಾತ್ರೆ ಮುಂದುವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್, ಹುತಾತ್ಮ ಯೋಧರ ಮನೆಗಳಿಗೆ ಪ್ರಧಾನ ಮಂತ್ರಿ ಭೇಟಿ ಕುಟುಂಬದವರನ್ನು ಮಾತನಾಡಿಸಬೇಕು. ಭಾರತ-ಪಾಕ್ ಯುದ್ಧವನ್ನು ನಾವು ಬೆಂಬಲಿಸುವುದಿಲ್ಲ. ಗಡಿ ಭಾಗದಲ್ಲಿ ಇದರಿಂದ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಾರಷ್ಟೆ. ಮಾಧ್ಯಮ ಮೂಲಕವೇ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com