ಎನ್ ಡಿಟಿವಿಗೆ 24 ಗಂಟೆ ನಿಷೇಧ ಖಂಡಿಸಿದ ಸಂಪಾದಕರ ಸಂಘ

ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಹಿಂದಿ ಸುದ್ದಿ ವಾಹಿನಿ ಎನ್ ಡಿಟಿವಿಗೆ 24 ಗಂಟೆಗಳ ಕಾಲ ನಿಷೇಧ ಹೇರಿರುವ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಹಿಂದಿ ಸುದ್ದಿ ವಾಹಿನಿ ಎನ್ ಡಿಟಿವಿಗೆ 24 ಗಂಟೆಗಳ ಕಾಲ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತೀಯ ಸಂಪಾದಕರ ಸಂಘ ಶುಕ್ರವಾರ ಖಂಡಿಸಿದ್ದು, ಈ ಕೂಡಲೇ ನಿಷೇಧ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಷೇಧ ನಿರ್ಧಾರ ಮಾಧ್ಯಮ ಮತ್ತು ಭಾರತೀಯ ನಾಗರಿಕರ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಹಾಗೂ ಸರ್ಕಾರದ ಈ ನಿರ್ಧಾರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ ಎಂದು ಸಂಪಾದಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿ ಪ್ರಸಾರ ನಿಯಮ ಉಲ್ಲಂಘಿಸಿದ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿ ಒಟ್ಟು 24 ಗಂಟೆ ವರೆಗೆ ಯಾವುದೇ ರೀತಿಯ ಕಾರ್ಯಾಕ್ರಮಗಳು ಹಾಗೂ ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎನ್ ಡಿಟಿವಿಗೆ ಆದೇಶಿಸಿದೆ.
ಉಗ್ರರ ದಾಳಿಗಳ ಸುದ್ದಿ ಬಿತ್ತರದ ಕುರಿತು ವಾಹಿನಿಯೊಂದರ ವಿರುದ್ಧ ನೀಡಲಾಗುವ ಮೊದಲ ಆದೇಶ ಇದಾಗಿದ್ದು, ಜನವರಿಯಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ವಾಹಿನಿ ಬಹಿರಂಗಪಡಿಸಿತ್ತು.
ಪಠಾಣ್ ಕೋಟ್ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಮಿಗ್, ಯುದ್ಧ ವಿಮಾನಗಳು, ರಾಕೆಟ್ ಉಡಾವಕಗಳು, ಮಾರ್ಟರ್ ಗಳು ಹೆಲಿಕಾಪ್ಟರ್ ಗಳು, ಇಂದನ್ ಟ್ಯಾಂಕ್ ಇತ್ಯಾದಿಗಳ ವಿವರಗಳನ್ನು ವಾಹಿನಿ ಪ್ರಸಾರ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com