ಜಮ್ಮು-ಕಾಶ್ಮೀರದಲ್ಲಿ ಅಶಾಂತಿ: ಪಾಕ್ ಸೇನೆಯ ಕೈವಾಡವನ್ನು ಬಯಲುಗೊಳಿಸಲಿರುವ ಎನ್ಐಎ

ಕಾಶ್ಮೀರದಲ್ಲಿ ಪ್ರತಿಭಟನೆ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಶೀಘ್ರವೇ ಬಯಲುಗೊಳಿಸಲಿದೆ.
ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ
ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಸಿಬ್ಬಂದಿಗಳ ಮೇಲೆ ಕಲ್ಲುತೂರಾಟ
ನವದೆಹಲಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ವಾನಿ ಹತ್ಯೆಯ ನಾಲ್ಕು ತಿಂಗಳ ಬಳಿಕವೂ ಕಾಶ್ಮೀರದಲ್ಲಿ ಪ್ರತಿಭಟನೆ ಮುಂದುವರೆದಿರುವ ಪರಿಣಾಮ, ಕಾಶ್ಮೀರದಲ್ಲಿ ಸತತ 4 ತಿಂಗಳಿನಿಂದ ಅಶಾಂತಿಯ ವಾತಾವರಣ ಮುಂದುವರೆದಿದೆ.  ಕಾಶ್ಮೀರದಲ್ಲಿ ಪ್ರತಿಭಟನೆ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಶೀಘ್ರವೇ ಬಯಲುಗೊಳಿಸಲಿದೆ. 
ಬುರ್ಹಾನ್ ವನಿ ಹತ್ಯೆಯಾದ ಬೆನ್ನಲ್ಲೇ ಬಂಧಿಸಲಾಗಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಗ್ರ ಬಹದೂರ್ ಅಲಿ ವಿರುದ್ಧ ಎನ್ಐಎ ತಿಂಗಳಾಂತ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದು, ಪಾಕಿಸ್ತಾನ ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಲಷ್ಕರ್ ಹಾಗೂ ಜೈಶ್-ಎ-ಮೊಹಮ್ಮದ್ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಭಯೋತ್ಪಾದಕರಿಗೆ ಯಾವೆಲ್ಲಾ ನೆರವು ನೀಡಿತ್ತು ಎಂಬುದನ್ನು ವಿವರಿಸಲಿದೆ. 
ಎನ್ಐಎ ಸಲ್ಲಿಸಲಿರುವ ಚಾರ್ಜ್ ಶೀಟ್ ನಲ್ಲಿ ಪಾಕ್ ಭಯೋತ್ಪಾದಕರಿಗೆ ಭಾರತ ತಲುಪಲು ಪಾಕಿಸ್ತಾನದ ಸೇನೆ ಯಾವೆಲ್ಲಾ ರೀತಿಯಲ್ಲಿ ಸುರಕ್ಷಿತ ಮಾರ್ಗಗಳನ್ನು ಒದಗಿಸುತ್ತಿತ್ತು ಹಾಗೂ ಯಾವೆಲ್ಲಾ ಸುಧಾರಿತ ಉಪಕರಣಗಳನ್ನು ನೀಡುತ್ತಿತ್ತು ಎಂಬ ಮಾಹಿತಿಯೂ ಇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಪಾಕ್ ಸೇನೆ ಕಾಶ್ಮೀರದಲ್ಲಿ ಅಶಾಂತಿಯನ್ನು ಉಂಟುಮಾಡಲು ಪ್ರತಿಭಟನಾ ನಿರತ ಕಲ್ಲುತೂರಾಟಗಾರರೊಂದಿಗೆ ಭಯೋತ್ಪಾದಕರು ಸೇರುವಂತೆ ಮಾಡಿದ್ದರ ಬಗ್ಗೆಯೂ ಎನ್ಐಎಗೆ ದಾಖಲೆಗಳು ದೊರೆತಿವೆ. ಇನ್ನು ಬಂಧನಕ್ಕೊಳಗಾಗಿರುವ ಬಹದ್ದೂರ್ ಅಲಿಯಿಂದ ಎಕೆ-47  ರೈಫಲ್, ಸಂವಹನ ಸಾಧನ(ಜಪಾನ್ ನಲ್ಲಿ ತಯಾರಾಗಿದ್ದು)ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಪಾಕ್ ಸೇನೆಯಲ್ಲದೇ ಮತ್ತೆ ಯಾರೂ  ಆತನಿಗೆ ಒದಗಿಸಿರುವ ಸಾಧ್ಯತೆಗಳಿಲ್ಲ ಎಂದು ಎನ್ಐಎ ಅಭಿಪ್ರಾಯಪಟ್ಟಿದೆ. ಬಂಧಿತ ಉಗ್ರ ಬಹದ್ದೂರ್ ಅಲಿ ಎನ್ಐಎ ಬಳಿ ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿಗೆ ಪಾಕ್ ಸೇನೆಯ ಕೈವಾಡ ಇರುವ ಬಗ್ಗೆ ಹಲವು ಮಾಹಿತಿ ನೀಡಿದ್ದು  ಎನ್ಐಎ ಚಾರ್ಜ್ ಶೀಟ್ ನಲ್ಲಿ ಪಾಕ್ ಸೇನೆಯ ಕೈವಾಡ ಶೀಘ್ರವೇ ಬಹಿರಂಗವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com