ಸುಪ್ರೀಂ ಕೋರ್ಟ್
ದೇಶ
ಒಂದು ದಿನ ನಿಷೇಧ: ಡಿ.5ಕ್ಕೆ ಸುಪ್ರೀಂನಲ್ಲಿ ಎನ್ ಡಿಟಿವಿ ಅರ್ಜಿ ವಿಚಾರಣೆ
ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಒಂದು ದಿನ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಿಂದಿ....
ನವದೆಹಲಿ: ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಒಂದು ದಿನ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಿಂದಿ ಸುದ್ದಿ ವಾಹಿನಿ ಎನ್ ಡಿಟಿವಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 5ಕ್ಕೆ ನಿಗದಿಪಡಿಸಿದೆ.
ನಿಷೇಧ ಆದೇಶವನ್ನು ಕೇಂದ್ರ ಸರ್ಕಾರ ತಡೆಹಿಡಿದಿರುವ ಹಿನ್ನೆಲೆಯಲ್ಲಿ ಅರ್ಜಿಯ ತುರ್ತು ವಿಚಾರಣೆಯ ಅಗತ್ಯ ಇಲ್ಲ ಎಂದು ಎನ್ ಡಿಟಿವಿ ಪರ ವಕೀಲ ಫಾಲಿ ಎಸ್ ನಾರಿಮನ್ ಹಾಗೂ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ನಡೆಸಲು ನಿರ್ಧರಿಸಿದೆ.
ನಿನ್ನೆಯಷ್ಟೇ ಎನ್ ಡಿಟಿವಿಯ ಹಿರಿಯ ಅಧಿಕಾರಿಯೊಬ್ಬರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ನಂತರ 24 ಗಂಟೆಗಳ ನಿಷೇಧ ಆದೇಶವನ್ನು ತಡೆಹಿಡಿಯಲಾಗಿತ್ತು.
ಪಠಾಣ್ ಕೋಟ್ ದಾಳಿ ಪ್ರಸಾರ ಮಾಡಿದ್ದಕ್ಕೆ ಒಂದು ದಿನದ ನಿಷೇಧ ವಿಧಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಎನ್ ಡಿಟಿವಿ ಸುಪ್ರೀಕೋರ್ಟ್ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ ಸರ್ಕಾರ ತನ್ನ ಆದೇಶವನ್ನು ತಡೆಹಿಡಿದಿತ್ತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಷೇಧ ನಿರ್ಧಾರವನ್ನು ಮಾಧ್ಯಮ ಸಂಸ್ಥೆಗಳು, ಭಾರತೀಯ ಸಂಪಾದಕರ ಸಂಘ ಹಾಗೂ ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ಕೇಂದ್ರ ಸರ್ಕಾರ ಮಾಧ್ಯಮ ಮತ್ತು ಭಾರತೀಯ ನಾಗರಿಕರ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಹಾಗೂ ಸರ್ಕಾರದ ಈ ನಿರ್ಧಾರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ ಎಂದು ಸಂಪಾದಕರ ಸಂಘ ವಾಗ್ದಾಳಿ ನಡೆಸಿತ್ತು.
ಇತ್ತೀಚೆಗೆ ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿ ಪ್ರಸಾರ ನಿಯಮ ಉಲ್ಲಂಘಿಸಿದ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿ ಒಟ್ಟು 24 ಗಂಟೆ ವರೆಗೆ ಯಾವುದೇ ರೀತಿಯ ಕಾರ್ಯಾಕ್ರಮಗಳು ಹಾಗೂ ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎನ್ ಡಿಟಿವಿಗೆ ಆದೇಶಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ