ನವದೆಹಲಿ: ಕಳ್ಳತನ ಹಾಗೂ ಪತ್ನಿಯ ಆಸ್ತಿ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರ ಅಳಿಯನನ್ನು ಮಂಗಳವಾರ ಕೋರ್ಟ್ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಶೀಲಾ ದಿಕ್ಷಿತ್ ಅವರ ಮಗಳ ಗಂಡ ಸೈಯದ್ ಇಮ್ರಾನ್ ಅವರನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಅಲಸೂರು ಬಳಿ ಬಂಧಿಸಿದ್ದರು. ಇಂದು ಆರೋಪಿಯನ್ನು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಪಂಕಜ್ ಶರ್ಮಾ ಅವರು ನವೆಂಬರ್ 17ರ ವರೆಗೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಇಮ್ರಾನ್ ವಿರುದ್ಧ ಕಳ್ಳತನದ ಆರೋಪವಿದ್ದು, ಕದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲು ಆರೋಪಿಯನ್ನು ಎರಡು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಕೋರ್ಟ್ ಮನವಿ ಮಾಡಿದರು. ದೆಹಲಿ ಪೊಲೀಸರ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ.
1996ರಲ್ಲಿ ಸೈಯದ್ ಇಮ್ರಾನ್ ಅವರನ್ನು ಮದುವೆಯಾಗಿದ್ದ ಶೀಲಾ ದಿಕ್ಷಿತ ಅವರ ಮಗಳು ಲತಿಕಾ ಕಳೆದ 10 ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇಮ್ರಾನ್ ವಿರುದ್ಧ ದೈಹಿಕ ಹಿಂಸೆ, ಕಳ್ಳತನ ಹಾಗೂ ಆಸ್ತಿ ದುರ್ಬಳಕೆ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.