500, 1000 ರು. ನೋಟ್ ನಿಷೇಧಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

500 ಹಾಗೂ 1000 ರುಪಾಯಿ ನೋಟ್ ನಿಷೇಧಕ್ಕೆ ತಡೆ ನೀಡಲು ಮಂಗಳವಾರ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಇದರಿಂದ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧಕ್ಕೆ ತಡೆ ನೀಡಲು ಮಂಗಳವಾರ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನೋಟ್ ನಿಷೇಧಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಎಲ್ ಥಾಕೂರ್ ಹಾಗೂ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ನೋಟ್ ನಿಷೇಧದಿಂದಾಗಿ ಜನರಿಗೆ ತೊಂದರೆಯಾಗದಂತೆ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರದ ನೋಟ್ ನಿಷೇಧದ ಕ್ರಮದಿಂದ ನಾಗರಿಕರ ವ್ಯವಹರಿಸುವ ಹಕ್ಕು ಉಲ್ಲಂಘನೆಯಾಗಿದ್ದು, ಈ ಕೂಡಲೇ ಸರ್ಕಾರದ ನಿರ್ಧಾರ ತಡೆ ನೀಡಬೇಕು ಎಂದು ದೆಹಲಿ ಮೂಲದ ವಕೀಲರಾದ ವಿವೇಕ್ ನಾರಾಯಣ ಶರ್ಮಾ ಮತ್ತು ಸಂಗಮ್ ಲಾಲ್ ಪಾಂಡೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ನವೆಂಬರ್ 8ರಂದು ದಿಢೀರ್ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ನಕಲಿ ನೋಟುಗಳ ಹಾವಳಿ ತಡೆಯುವುದಕ್ಕಾಗಿ ಇಂದು ಮಧ್ಯರಾತ್ರಿಯಿಂದಲೇ 500 ಹಾಗೂ 1000 ರುಪಾಯಿ ನೋಟ್ ಗಳಿಗೆ ನಿಷೇಧ ಹೇರಲಾಗಿದೆ ಎಂದು ಘೋಷಿಸಿದ್ದರು. ಅಂದಿನಿಂದ ದೇಶಾದ್ಯಂತ ಹಣಕಾಸಿನ ತಾತ್ಕಾಲಿಕ ತರ್ತು ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನ ಎಟಿಎಂ ಹಾಗೂ ಬ್ಯಾಂಕ್ ಮುಂದೆ ನೋಟ್ ವಿನಿಮಯ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com