ನೋಟುಗಳ ರದ್ದತಿ ಕ್ರಮದ ಬಗ್ಗೆ ಅದಾನಿ, ಅಂಬಾನಿಗೆ ಮುಂಚೆಯೇ ಮಾಹಿತಿ ಇತ್ತು: ಬಿಜೆಪಿ ಶಾಸಕ

"500, 1000 ರೂ ನೋಟುಗಳ ರದ್ದತಿ ಬಗ್ಗೆ ಅಂಬಾನಿ, ಅದಾನಿಗಳಿಗೆ ಮುಂಚೆಯೇ ಮಾಹಿತಿ ಇತ್ತು" ಸ್ವತಃ ಬಿಜೆಪಿ ಪಕ್ಷದ ಶಾಸಕರೊಬ್ಬರು ಈ ಬಗ್ಗೆ ಕ್ಯಾಮರಾ ಮುಂದೆ ಹೇಳಿಕೆ ನೀಡಿದ್ದಾರೆ.
ಅದಾನಿ-ಅಂಬಾನಿ
ಅದಾನಿ-ಅಂಬಾನಿ
ನವದೆಹಲಿ: "500, 1000 ರೂ ನೋಟುಗಳ ರದ್ದತಿ ಬಗ್ಗೆ ಅಂಬಾನಿ, ಅದಾನಿಗಳಿಗೆ ಮುಂಚೆಯೇ ಮಾಹಿತಿ ಇತ್ತು" ಹೀಗೆ ಆರೋಪ ಮಾಡಿರುವುದು ಆಮ್ ಆದ್ಮಿ ಪಕ್ಷದ ನಾಯಕರೋ ಅಥವಾ ಕಾಂಗ್ರೆಸ್ ನ ನೇತಾರರೋ ಅಲ್ಲ. ಸ್ವತಃ ಬಿಜೆಪಿ ಪಕ್ಷದ ಶಾಸಕರೊಬ್ಬರು ಈ ಬಗ್ಗೆ ಕ್ಯಾಮರಾ ಮುಂದೆ ಹೇಳಿಕೆ ನೀಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರು ನ.8 ರಂದು ಘೋಷಣೆ ಮಾಡಿದ್ದ 500, 1000 ರೂ ನೋಟುಗಳ ರದ್ದತಿ ಕ್ರಮದ ಬಗ್ಗೆ ಉದ್ಯಮಿಗಳಾದ ಅಂಬಾನಿ, ಅದಾನಿಗಳಿಗೆ ಹಾಗೂ ಇನ್ನೂ ಕೆಲವು ಮೋದಿ ಆಪ್ತರಿಗೆ ಘೋಷಣೆಗೂ ಮುನ್ನವೇ ಮಾಹಿತಿ ಇತ್ತು ಎಂಬ ಆರೋಪ ಈಗಾಗಲೇ ಕೇಳಿಬಂದಿದ್ದು, ಇದಕ್ಕೆ ಪೂರಕವೆಂಬಂತೆ ಆಡಳಿತ ವರ್ಗಕ್ಕೆ ನಿಕಟವಾಗಿದ್ದ ವ್ಯಕ್ತಿಗಳಿಗೆ ಸಂಬಂಧಿಸಿದವರು ನೋಟುಗಳ ರದ್ದತಿ ಕ್ರಮ ಘೋಷಣೆಗೂ ಮುನ್ನವೇ 2 ಸಾವಿರ ರೂ ಹೊಸ ನೋಟುಗಳ ಕಂತೆಯನ್ನಿಟ್ಟುಕೊಂಡು ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೀಡಾಗಿದ್ದವು. 
ಈಗ ಸ್ವತಃ ಬಿಜೆಪಿ ಶಾಸಕರೇ ಕೆಂದ್ರ ಸರ್ಕಾರದ ಕ್ರಮ ಅಂಬಾನಿ, ಅದಾನಿಗಳಿಗೆ ತಿಳಿದಿತ್ತು ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ರಾಜಸ್ಥಾನದ ಬಿಜೆಪಿ ಶಾಸಕರಾಗಿರುವ ಭವಾನಿ ಸಿಂಗ್ ರಾಜವತ್, 500, 1000 ರೂ ನೋಟುಗಳ ರದ್ದತಿ ಬಗ್ಗೆ ಅಂಬಾನಿ ಹಾಗೂ ಅದಾನಿಗೆ ಮುಂಚೆಯೇ ಸುಳಿವು ದೊರೆತಿತ್ತು, ಕೇಂದ್ರ ಸರ್ಕಾರದ ಘೋಷಣೆಗೆ ಅನುಗುಣವಾಗಿ ತಾವು ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದರು, ನೀವು(ಸರ್ಕಾರ) ಹೊಸ ನೋಟುಗಳನ್ನು ಬೇಡಿಕೆಗೆ ತಕ್ಕಂತೆ ಮುದ್ರಿಸಬೇಕಿತ್ತು ಎಂದು ಹೇಳಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ. 
ಇದೇ ವೇಳೆ ಕೇಂದ್ರ ಸರ್ಕಾರದ ಘೋಷಣೆಯನ್ನು ಸರಿಯಾಗಿ ಯೋಜಿಸದ ಘೋಷಣೆ ಎಂದು ಹೇಳಿರುವ ಬಿಜೆಪಿ ಶಾಸಕ, ನೋಟುಗಳ ರದ್ದತಿಯನ್ನು ಹಂತ ಹಂತವಾಗಿ ಜಾರಿಗೊಳಿಸಬಹುದಿತ್ತು ಎಂದು ಭವಾನಿ ಸಿಂಗ್ ರಾಜವತ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆಯೂ ಸಹ ಭವಾನಿ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿರುವ ಉದಾಹರಣೆಗಳಿವೆ, ತಾವು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರದಲ್ಲಿ ತರಬೇತಿ ಪಡೆಯುತ್ತಿರುವ ಬಿಹಾರಿ ವಿದ್ಯಾರ್ಥಿಗಳನ್ನು ಕ್ರಿಮಿನಲ್ ಹಿನ್ನೆಲೆ ಪರೀಕ್ಷೆಗೊಳಪಡಿಸಬೇಕೆಂದೂ, ತಲೆ ಕೂದಲು ಉದುರುವ ಸಾಧ್ಯತೆ ಇರುವುದರಿಂದ ಬೈಕರ್ ಗಳು ಹೆಲ್ಮೆಟ್ ಧರಿಸುವುದನ್ನು ಕಡಿಮೆ ಮಾಡಬೆಕೆಂದೂ ಈ ಹಿಂದೆ ಭವಾನಿ ಸಿಂಗ್ ಹೇಳಿಕೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com