ವಿಪಕ್ಷಗಳಿಗೆ ಬಣ್ಣ ಬಯಲಾಗುವ ಹೆದರಿಕೆ, ನೋಟು ರದ್ದತಿ ಚರ್ಚೆಯಿಂದ ತಪ್ಪಿಸಿಕೊಳ್ಳಲು ಯತ್ನ: ಕೇಂದ್ರ ಸರ್ಕಾರ

ಪ್ರಧಾನಿಯೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿರುವ ವಿರೋಧಪಕ್ಷಗಳಿಗೆ ನೋಟು ರದ್ದತಿ ಚರ್ಚೆಯಿಂದ ತಮ್ಮ ಬಣ್ಣ ಬಯಲಾಗುವ ಹೆದರಿಕೆ ಉಂಟಾಗಿದೆ.
ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಪ್ರತಿಭಟನೆ
ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಪ್ರತಿಭಟನೆ
ನೋಟು ರದ್ದತಿ ವಿಚಾರವಾಗಿ ಪ್ರಧಾನಿ ಉತ್ತರ ನೀಡಬೇಕೆಂದು ಪಟ್ಟು ಹಿಡಿದು, ಸಂಸತ್ ಅಧಿವೇಶನಕ್ಕೆ ಅಡ್ಡಿ ಉಂಟು ಮಾಡುತ್ತಿರುವ ವಿರೋಧಪಕ್ಷಗಳ ನಡೆಗೆ ಕೇಂದ್ರ ಸರ್ಕಾರದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದಿರುವ ವಿರೋಧಪಕ್ಷಗಳಿಗೆ ನೋಟು ರದ್ದತಿ ಚರ್ಚೆಯಿಂದ ತಮ್ಮ ಬಣ್ಣ ಬಯಲಾಗುವ ಹೆದರಿಕೆ ಉಂಟಾಗಿದೆ. ಆದ್ದರಿಂದಲೇ ಚರ್ಚೆಯಿಂದ ಪರಾರಿಯಾಗಲು ಯತ್ನಿಸುತ್ತಿವೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. 
ವಿಪಕ್ಷಗಳ ಗದ್ದಲದಿಂದಾಗಿ ನ.17ರ ಸಂಸತ್ ಕಲಾಪ ಮುಂದೂಡಿಕೆಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿರುವ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದಗಿ ಬಗ್ಗೆ ಸಂಸತ್ ನಲ್ಲಿ ಉತ್ತರ ನೀಡಬೇಕು ಎಂಬ ಒಂದು ಅಂಶವನ್ನಿಟ್ಟುಕೊಂಡು ವಿರೋಧಪಕ್ಷಗಳು ಚರ್ಚೆಯಿಂದ ಪಲಾಯನ ಮಾಡಲು ಯತ್ನಿಸುತ್ತಿವೆ, ಸಂಸತ್ ನ ನಿಯಮಗಳ ಪ್ರಕಾರ ನೋಟು ರದ್ದತಿ ಬಗ್ಗೆ ಅದಕ್ಕೆ ಸಂಬಂಧಿಸಿದ ಸಚಿವರು ಅಥವಾ ಸರ್ಕಾರದ ಭಾಗವಾಗಿರುವ ಸಚಿವರು ಸದನಕ್ಕೆ ಉತ್ತರ ನೀಡಬಹುದಾಗಿದೆ. ಆದರೆ ವಿರೊಧಪಕ್ಷಗಳು ತಮ್ಮ ಬಣ್ಣ ಬಯಲಾಗುವ ಹೆದರಿಕೆಯಿಂದ ಪ್ರಧಾನಿ ಮೋದಿ ಅವರೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿಯುವ ಮೂಲಕ ಚರ್ಚೆಯಿಂದ ಪಲಾಯನ ಮಾಡಲು ಯತ್ನಿಸುತ್ತಿವೆ ಎಂದು ವೆಂಕಯ್ಯ ನಾಯ್ಡು ಆರೋಪಿಸಿದ್ದು, ವಿರೋಧಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. 
ವಿರೋಧಪಕ್ಷಗಳು ದ್ವಂದ್ವನೀತಿಯನ್ನು ಅನುಸರಿಸುತ್ತಿದೆ. ನೋಟು ರದ್ದತಿ ಪರ ಅಥವಾ ವಿರೋಧದ ನಿಲುವನ್ನು ವಿಪಕ್ಷಗಳು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ವಿಪಕ್ಷಗಳು ಗೊಂದಲಕ್ಕೆ ಸಿಲುಕಿವೆ, ಕಪ್ಪುಹಣದ ಪರವಾಗಿ ಯಾರಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಯಾರಿದ್ದಾರೆ ಎಂಬುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ, ಕ್ರಾಂತಿಕಾರಿ ನಿಲುವನ್ನು ಯಾರು ತೆಗೆದುಕೊಂಡಿದ್ದಾರೆ ಎಂಬುದನ್ನೂ ಜನರೇ ನಿರ್ಧರಿಸಲಿದ್ದಾರೆ, ಈ ಬಗ್ಗೆ ಚರ್ಚೆ ನಡೆಯಲಿ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com