ನವದೆಹಲಿ: 500, 1000 ರೂ ನೋಟುಗಳ ರದ್ದತಿಯ ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರ ಊದಾಸೀನತೆ ತೋರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಹಾಜರಾಗುವವರೆಗೂ ನೋಟು ರದ್ದತಿ ವಿಷಯದ ಬಗ್ಗೆ ಸಂಸತ್ ನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಎಚ್ಚರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಹಾಜರಾಗುವವರೆಗೂ ಚರ್ಚೆಗೆ ಅವಕಾಶ ನೀಡಬಾರದು ಎಂಬ ತೀರ್ಮಾವನ್ನು ಪ್ರತಿಪಕ್ಷಗಳು ತೆಗೆದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸರ್ಕಾರದ ಘೋಷಣೆಯಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿರುವುದರ ಬಗ್ಗೆ ಗಂಭೀರವಾಗಿ ಯೋಚಿಸುವುದೇ ಆದರೆ ಅವರು ಸದನಕ್ಕೆ ಬಂದು ಮಾತನಾಡಲಿ ಎಂದು ಮಾಯಾವತಿ ಆಗ್ರಹಿಸಿದ್ದಾರೆ.
ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಜನಸಾಮಾನ್ಯವರ ನೋವು ಇವರಿಗೆ ಅರ್ಥವಾಗುತ್ತಿಲ್ಲ ಎಂದು ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಸದನಕ್ಕೆ ಬಂದ ನಂತರವೇ ನೋಟು ನಿಷೇಧದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂಬ ಬಿಎಸ್ ಪಿ ನಿರ್ಣಯವನ್ನು ಬಹುತೇಕ ಪ್ರತಿಪಕ್ಷಗಳು ಸ್ವಾಗತಿಸಿವೆ ಎಂದು ಮಾಯಾವತಿ ಇದೇ ವೇಳೆ ತಿಳಿಸಿದ್ದಾರೆ.