ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅಲೀಘರ್ ನಲ್ಲಿ ಪತ್ತೆ: ಪೊಲೀಸರಿಗೆ ಪತ್ರ ಬರೆದ ಮಹಿಳೆ

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಜೆಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅಲೀಘರ್ ನಲ್ಲಿ ಪತ್ತೆ: ಪೊಲೀಸರಿಗೆ ಪತ್ರ ಬರೆದ ಮಹಿಳೆ
ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ನ.14ರಂದು ಜೆಎನ್ ಯುವಿನ ಮಾಹಿ-ಮಾಂಡವಿ ಹಾಸ್ಟೆಲ್ ಗೆ ಅನಾಮಿಕ ಪತ್ರವೊಂದು ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 
ಪೊಲೀಸ್ ಅಧಿಕಾರಿಗಳ ಈಗಿನ ಮಾಹಿತಿ ಪ್ರಕಾರ, ಅಲೀಘರ್ ನಿಂದ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದ್ದು ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಜೀಬ್ ಅಹ್ಮದ್ ನ್ನು ಅಲೀಘರ್ ನ ಮಾರುಕಟ್ಟೆಯಲ್ಲಿ ನೋಡಿರುವುದಾಗಿ ಪತ್ರ ಬರೆದಿರುವ ಮಹಿಳೆ ತಿಳಿಸಿದ್ದಾರೆ. ನಜೀಬ್ ಅಹ್ಮದ್ ಅವರನ್ನುದ್ದೇಶಿಸಿ ಪತ್ರ ಬರೆಯಲಾಗಿದೆ. ಪತ್ರವನ್ನು ಸ್ವೀಕರಿಸಿರುವ ಹಾಸ್ಟೆಲ್ ಅಧ್ಯಕ್ಷ ಅಜೀಮ್ ಅದನ್ನು ನಜೀಬ್ ಅಹ್ಮದ್ ಅವರ ತಾಯಿಗೆ ನೀಡಿದ್ದು, ಈಗ ಕ್ರೈಂ ಬ್ರಾಂಚ್ ಕೈಸೇರಿದೆ. 
ನಾಪತ್ತೆಯಾಗಿರುವ ನಜೀಬ್ ಅಹ್ಮದ್ ಬಂಧನದಿಂದ ತಪ್ಪಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ ಅಷ್ಟೇ ಅಲ್ಲದೇ, ಪತ್ರ ಬರೆದ ಮಹಿಳೆಯ ಸಹಾಯವನ್ನೂ ಕೋರಿದ್ದ ಎಂದು ಪತ್ರದಲ್ಲಿ ತಿಳಿಸಲಾಗಿದ್ದು, ಆಕೆಯನ್ನು ಸಂಪರ್ಕಿಸಬಹುದಾದ ವಿಳಾಸವನ್ನೂ ಮಹಿಳೆ ತಿಳಿಸಿದ್ದಾರೆ.      
ಪತ್ರದಲ್ಲಿ ತಿಳಿಸಲಾಗಿದ್ದ ವಿಳಾಸಕ್ಕೆ ಕ್ರೈಮ್ ಬ್ರಾಂಚ್ ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಆ ವಿಳಾಸದಲ್ಲಿ ಯಾರೂ ಇರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಬರೆದಿರುವ ಪತ್ರದಲ್ಲಿ ನಜೀಬ್ ಅಹ್ಮದ್ ನ್ನು ಬಂಧಿಸಿಡಲಾಗಿದ್ದ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇನ್ನು ಇದೇ ವೇಳೆ ಜೆಎನ್ ಯು ವಿವಿಯಿಂದ ನಾಪತ್ತೆಯಾದ ನಂತರ ಅಹ್ಮದ್ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಕ್ಯಾಂಪಸ್ ಗೆ ಭೇಟಿ ನೀಡಿರುವ ಬಗ್ಗೆ ಸಿಸಿಟಿವಿ ಫುಟೇಜ್ ನ್ನು ವಿಶ್ವವಿದ್ಯಾನಿಲಯ ಪೊಲೀಸರಿಗೆ ಹಸ್ತಾಂತರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com