ನ.8 ರ ನಂತರದ ವಹಿವಾಟಿನ ವಿವರಗಳೇ ಏಕೆ, 6 ತಿಂಗಳ ಹಿಂದಿನದ್ದನ್ನೂ ತೆಗೆಸಿ: ಪ್ರಧಾನಿಗೆ ಕೇಜ್ರಿವಾಲ್ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಸಂಸದರಿಗೆ, ನಾಯಕರಿಗೆ ನ.8 ರಿಂದ ಡಿ.31 ರವರೆಗಿನ ಬ್ಯಾಂಕ್ ವಹಿವಾಟಿನ ವಿವರಗಳನ್ನು ನೀಡುವಂತೆ ಸೂಚನೆ ನೀಡಿರುವುದರ ಬಗ್ಗೆ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: 500-1000 ರೂ ನೋಟುಗಳನ್ನು ನಿಷೇಧಿಸಿರುವ ಕ್ರಮದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಸಂಸದರಿಗೆ, ನಾಯಕರಿಗೆ ನ.8 ರಿಂದ ಡಿ.31 ರವರೆಗಿನ ಬ್ಯಾಂಕ್ ವಹಿವಾಟಿನ ವಿವರಗಳನ್ನು ನೀಡುವಂತೆ ಸೂಚನೆ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
ಪ್ರಧಾನಿ ಮೋದಿ ಅವರು ಪಕ್ಷದ ನಾಯಕರಿಗೆ ನ.8 ರಿಂದ ಡಿ. 31 ವರೆಗಿನ ಬ್ಯಾಂಕ್ ವಹಿವಾಟು ವಿವರಗಳನ್ನು ಕೇಳುವ ಬದಲು ಕಳೆದ 6 ತಿಂಗಳ ವಹಿವಾಟುಗಳನ್ನು ಕೇಳಬೇಕಿತ್ತು ಎಂದು ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.  ನೋಟು ನಿಷೇಧ ಹೇರಿಕೆಯ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನವೇ ಕೆಲ ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿದಿತ್ತು ಎಂದು ವಿರೋಧ ಪಕ್ಷಗಳು ಈ ಹಿಂದೆ ಆರೋಪ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಪಕ್ಷದ ನಾಯಕರಿಗೆ ಬ್ಯಾಂಕ್ ವಹಿವಾಟಿನ ವಿವರಗಳನ್ನು ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 
ನೋಟು ನಿಷೇಧ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಅಸಮಾಧಾನ ವ್ಯಕ್ತಪಡಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧದ ನಿರ್ಧಾರದ ಬಗ್ಗೆ ತಮ್ಮ ಆಪ್ತರಿಗೆ ಮಾಹಿತಿ ನೀಡಿದ್ದರು, ಕೇಂದ್ರ ಸರ್ಕಾರ ಕೈಗೊಂಡ ಕ್ರಮದ್ಲಲಿ ಹಗರಣ ನಡೆದಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. 
ಈಗ ಪ್ರಧಾನಿ ಪಕ್ಷದ ಸದಸ್ಯರಿಗೆ ನೀಡಿರುವ ಸೂಚನೆಯನ್ನು ಪ್ರಶ್ನಿಸಿರುವ ಕೇಜ್ರಿವಾಲ್, ನ.8 ರಿಂದ ಮಾತ್ರ ಏಕೆ, ಪಕ್ಷದ ಸದಸ್ಯರು ನಡೆಸಿರುವ 6 ತಿಂಗಳ ಬ್ಯಾಂಕ್ ವಹಿವಾಟಿನ ವಿವರಗಳನ್ನು ಪಡೆಯಿರಿ, ಅಂತೆಯೇ ಪಕ್ಷದ ಸದಸ್ಯರ ಸ್ನೇಹರ ಬ್ಯಾಂಕ್ ಖಾತೆ ವಿವರ, ಅಂಬಾನಿ, ಅದಾನಿಗಳ ಬ್ಯಾಂಕ್ ಖಾತೆ ಪೇಟಿಎಂ, ಬಿಗ್ ಬಜಾರ್ ಗಳ ವಹಿವಾಟುಗಳ ವಿವರಗಳನ್ನೂ ಕೇಳಿ ಎಂದು ಪ್ರಧಾನಿಗೆ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com