ಪೆಟ್ರೋಲ್ ಬಂಕ್, ವಿಮಾನ ನಿಲ್ದಾಣಗಳಲ್ಲಿ ಹಳೇ ನೋಟ್ ಚಲಾವಣೆಗೆ ಡಿ.2 ಕಡೇ ದಿನ

ಹಳೆ 500ರ ನೋಟುಗಳನ್ನು ಪೆಟ್ರೋಲ್ ಬಂಕ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಡಿಸೆಂಬರ್ 15ರವರೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಹಳೆ 500ರ ನೋಟುಗಳನ್ನು ಪೆಟ್ರೋಲ್ ಬಂಕ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಡಿಸೆಂಬರ್ 15ರವರೆಗೆ ಬಳಸಲು ಅವಕಾಶ ನೀಡಿದ್ದ ಸೌಲಭ್ಯವನ್ನು ಇದೀಗ ಡಿಸೆಂಬರ್ 2ರವರೆಗೆ ಕಡಿತಗೊಳಿಸಿದೆ. ಜನರು ತಮ್ಮ ಬಳಿ ಹಳೆಯ 500 ರೂಪಾಯಿ ನೋಟುಗಳಿದ್ದರೆ ಪೆಟ್ರೋಲ್ ಬಂಕ್ ಮತ್ತು ವಿಮಾನ ನಿಲ್ದಾಣಗಳಲ್ಲಿ ನಾಳೆಯವರೆಗೆ ಮಾತ್ರ ಬಳಸಬಹುದು.
ಇದೇ ಶನಿವಾರದ ನಂತರ 500ರ ನೋಟುಗಳನ್ನು ಪೆಟ್ರೋಲ್, ಡೀಸೆಲ್, ಗ್ಯಾಸ್ ಗಳನ್ನು ಸಾರ್ವಜನಿಕ ವಲಯದ ಅಧಿಕೃತ ನಿಲ್ದಾಣಗಳಲ್ಲಿ ಮತ್ತು ತೈಲ ಕಂಪೆನಿಗಳಲ್ಲಿ ಬಳಸುವಂತಿಲ್ಲ. ಮತ್ತು ವಿಮಾನ ನಿಲ್ದಾಣಗಳಲ್ಲಿ ಕೂಡ ಟಿಕೆಟ್ ಕೊಳ್ಳಲು ಹಳೆಯ 500ರ ನೋಟುಗಳನ್ನು ನೀಡುವಂತಿಲ್ಲ ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.
ಹಳೆ ನೋಟುಗಳು ಇತರ ಸೌಲಭ್ಯ ಬಿಲ್ ಪಾವತಿಗಳಿಗೆ ಬಳಸಬಹುದು. ಸರ್ಕಾರಿ ಅಥವಾ ಸಾರ್ವಜನಿಕ ವಲಯಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಡಿಸೆಂಬರ್ 15ರವರೆಗೆ ಬಳಸಲು ಅವಕಾಶವಿದೆ. ಅಲ್ಲದೆ ಸರ್ಕಾರ ಈ ಹಿಂದೆ ಘೋಷಿಸಿದ್ದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಗೆ ಹಳೆಯ 500ರ ನೋಟುಗಳನ್ನು ನೀಡುವ ಸೌಲಭ್ಯವನ್ನು ಶನಿವಾರದಿಂದ ಬಿಟ್ಟುಬಿಡಲಿದೆ. 
ಹಳೆಯ 500 ಮತ್ತು 1000ದ ನೋಟುಗಳನ್ನು ನಾಳೆವರೆಗೆ ಟೋಲ್ ಶುಲ್ಕ ಪಾವತಿಗೆ ಸ್ವೀಕರಿಸಲಾಗುವುದೆಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ನಾಡಿದ್ದು ಶನಿವಾರದಿಂದ 500 ರೂಪಾಯಿ ನೋಟುಗಳನ್ನು ಮಾತ್ರ ಸ್ವೀಕರಿಸಲಾಗುವುದೆಂದು ಹೇಳಲಾಗುತ್ತಿತ್ತು. ಆದರೆ ಇದೀಗ ಆ ಸೌಲಭ್ಯವನ್ನು ಕೂಡ ಹಿಂತೆಗೆದುಕೊಳ್ಳಲಾಗಿದೆ.
ಹೀಗಾಗಿ ಇದೇ ಶನಿವಾರದ ನಂತರ ಇಂಧನ ಖರೀದಿ, ವಿಮಾನ ಟಿಕೆಟ್ ಬುಕ್ಕಿಂಗ್, ಹೆದ್ದಾರಿಗಳ ಟೋಲ್ ಶುಲ್ಕ ಪಾವತಿಗಳಲ್ಲಿ ಕಡಿಮೆ ಮುಖಬೆಲೆಯ ಮತ್ತು 500 ಮತ್ತು 2000ದ ಹೊಸ ನೋಟುಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
ಕಪ್ಪು ಹಣ ಸಾಗಾಟ ಮಾಡಲು ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಹಳೆ ನೋಟುಗಳನ್ನು ಪೆಟ್ರೋಲ್ ಬಂಕ್ ಮತ್ತು ಹೆದ್ದಾರಿಗಳಲ್ಲಿ ಬಳಸುವುದನ್ನು ನಾಡಿದ್ದಿನಿಂದ ನಿಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com