
ನಾಗಪುರ: ಯುವಕನ ಶರೀರದಲ್ಲಿ ಅಸಹಜವಾಗಿ ಬೆಳೆದಿದ್ದ ಸುಮಾರು 18 ಸೆಂ.ಮೀ ಉದ್ದದ ಬಾಲವನ್ನ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ಮೂಲಕ ಬೇರ್ಪಡಿಸಿದೆ.
ನಾಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ನರ ಶಸ್ತ್ರಚಿಕಿತ್ಸಾ ತಂಡವೊಂದು 18 ವರ್ಷದ ಯುವಕನ ಶರೀರದಿಂದ 18 ಸೆಂ.ಮೀ. ಉದ್ದದ ಮಾನವ ಬಾಲವನ್ನು ಯಶಸ್ವಿಯಾಗಿ ಬೇರ್ಪಡಿಸಿದೆ. ಈತನಕದ ಅತೀ ಉದ್ದದ ಬಾಲ ಎಂದು ಹೇಳಲಾಗುತ್ತಿದೆ.
ಬಾಲದ ಅಸಹಜ ಬೆಳವಣಿಗೆಯ ಬಗ್ಗೆ ಯುವಕನ ಕುಟುಂಬ ಸದಸ್ಯರಿಗೆ ಮೊದಲೇ ಗೊತ್ತಿತ್ತು. ಆದರೆ, ಅವರು ಸಾಮಾಜಿಕ ಭಯ ಮತ್ತು ಅದಕ್ಕೆ ಸಂಬಂಧಿಸಿದ ಮೂಢನಂಬಿಕೆಗಳ ಕಾರಣ ವೈದ್ಯರನ್ನು ಸಂಪರ್ಕಿಸಿರಲಿಲ್ಲ. ಬಾಲದ ಅಸಹಜ ಬೆಳವಣಿಗೆಯಿಂದ ಯುವಕನಿಗೆ ತೀರ ನೋವು ಉಂಟಾಗುತ್ತಿತ್ತು.
ಯುವಕನ ಈ ಪರಿಸ್ಥಿತಿಯು ಆತನಿಗೆ ಚಿಂತಾಜನಕವಾಗಿ ಪರಿಣಮಿಸಿದ ಬಳಿಕ ಪೋಷಕರು ಕಳೆದ ವಾರ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದಾದ ಎರಡು ದಿನಗಳ ಬಳಿಕ ಅದರ ಶಸ್ತ್ರಚಿಕಿತ್ಸೆ ನಡೆಯಿತು ಎಂದು ವೈದ್ಯರು ಹೇಳಿದ್ದಾರೆ.
ಬಾಲದ ಗಾತ್ರದಲ್ಲಿ ಬೆಳವಣಿಗೆಯಾಗಿ ಅದರೊಳಗೆ ಮೂಳೆ ಅಭಿವೃದ್ಧಿಗೊಂಡಾಗ, ಅದರಿಂದ ಹುಡುಗನಿಗೆ ಹಿಂಭಾಗದಿಂದ ಒತ್ತಿದಂತೆ ಅನುಭವವಾಗಲು ಆರಂಭವಾಯಿತು. ಇದರಿಂದ ಆತನಿಗೆ ಶಾರೀರಿಕ ಮತ್ತು ಮಾನಸಿಕವಾಗಿ ನೋವು ಉಂಟಾಗಿತ್ತು. ಈ ಬಾಲದಿಂದಾಗಿ ಯುವಕನಿಗೆ ಸರಿಯಾಗಿ ಮಲಗಲು ಮತ್ತು ಕುಳಿತುಕೊಳ್ಳಲು ಆಗುತ್ತಿರಲಿಲ್ಲ ಎಂದು ಡಾ. ಗಿರಿ ತಿಳಿಸಿದ್ದಾರೆ.
Advertisement