ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಶೈಕ್ಷಣಿಕ ಅರ್ಹತೆಗೆ ಸಂಬಂಧಪಟ್ಟಂತೆ ನಿಗದಿತ ದಾಖಲೆಗಳನ್ನು ಸಲ್ಲಿಸುವಂತೆ ನಗರ ನ್ಯಾಯಾಲಯ ದೆಹಲಿ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
2014ರಲ್ಲಿ ಲೋಕಸಭಾ ಚುನಾವಣೆ ವೇಳೆ ಶೈಕ್ಷಣಿಕ ಹಿನ್ನೆಲೆ ಕುರಿತು ಚುನಾಣಾ ಆಯೋಗಕ್ಕೆ ಸ್ಮೃತಿ ಇರಾನಿಯವರು ತಪ್ಪು ಮಾಹಿತಿ ನೀಡಿದ್ದರು ಎಂಬ ದೂರಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಈ ದಾಖಲೆಗಳನ್ನು ಕೇಳಿದೆ.
ಆದೇಶ ನೀಡಬೇಕಾಗಿದ್ದ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಹರಿವಿಂದರ್ ಸಿಂಗ್, ಈ ದೂರಿಗೆ ಸಂಬಂಧಪಟ್ಟಂತೆ ಕೆಲವು ವಿಷಯಗಳು ಅಗತ್ಯವಿದೆ, ಹಾಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಸ್ಮೃತಿ ಇರಾನಿಯವರ ಶೈಕ್ಷಣಿಕ ಅರ್ಹತೆ ಕುರಿತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯನ್ನು ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ ಎಂದು ಆಯೋಗದ ಅಧಿಕಾರಿಯೊಬ್ಬರು ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿದ್ದರು. ಆದರೆ ಮಾಹಿತಿ ಆಯೋಗದ ವೆಬ್ ಸೈಟ್ ನಲ್ಲಿ ಸಿಗುತ್ತದೆ ಎಂದು ಇರಾನಿಯವರ ವಿರುದ್ಧ ದೂರು ನೀಡಿದ ಹವ್ಯಾಸಿ ಬರಹಗಾರ ಅಹ್ಮರ್ ಖಾನ್ ಹೇಳಿದ್ದಾರೆ.
ಅಹ್ಮರ್ ಖಾನ್ ತಮ್ಮ ದೂರಿನಲ್ಲಿ ಇರಾನಿಯವರು ತಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಬೇಕೆಂದೇ ತಪ್ಪು ಮಾಹಿತಿ ನೀಡಿದ್ದಾರೆ. ಆದುದರಿಂದ ಐಪಿಸಿ ಸೆಕ್ಷನ್ 125 ಎ ಯ ಪ್ರಾತಿನಿಧ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.