ನವದೆಹಲಿ: ದೇಶಾದ್ಯಂತ ಮುಸ್ಲಿಮರ ತ್ರಿವಳಿ ತಲಾಖ್ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ವೈಯಕ್ತಿಕ ಕಾನೂನು ಸಂವಿಧಾನಕ್ಕೆ ಬದ್ಧವಾಗಿರಬೇಕು ಮತ್ತು ಲಿಂಗಸಮಾನತೆ, ಗೌರವಯುತ ಬದುಕಿನ ಹಕ್ಕಿನ ಮಿತಿಗಳಿಗೆ ಅನುಗುಣವಾಗಿರಬೇಕು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾನುವಾರ ಹೇಳಿದ್ದಾರೆ.
‘ತ್ರಿವಳಿ ತಲಾಖ್ ಮತ್ತು ಸರ್ಕಾರದ ಪ್ರಮಾಣಪತ್ರ’ ಶೀರ್ಷಿಕೆಯ ಫೇಸ್ಬುಕ್ ಪೋಸ್ಟ್ ನಲ್ಲಿ ಈ ವಿಚಾರವನ್ನು ತಿಳಿಸಿರುವ ಜೇಟ್ಲಿ, ವೈಯಕ್ತಿಕ ಕಾನೂನುಗಳು ಮೂಲಭೂತ ಹಕ್ಕುಗಳಿಗೆ ಬದ್ಧವಾಗಿರಬೇಕು ಎಂಬ ಖಡಾಖಂಡಿತ ನಿಲುವು ತೆಗೆದುಕೊಳ್ಳಲು ಹಿಂದಿನ ಸರ್ಕಾರಗಳು ನಾಚಿಕೆ ಪಟ್ಟಿದ್ದವು. ಆದರೆ ಈಗಿನ ಸರ್ಕಾರ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ತೆಗೆದುಕೊಂಡಿದೆ ಎಂದು ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
‘ವೈಯಕ್ತಿಕ ಕಾನೂನುಗಳು ಸಂವಿಧಾನವನ್ನು ಅನುಸರಿಸಬೇಕು. ಆದ್ದರಿಂದ ತ್ರಿವಳಿ ತಲಾಖ್ ವಿಷಯವನ್ನು ಸಮಾನತೆ ಮತ್ತು ಗೌರವಯುತ ಬದುಕಿನ ಹಕ್ಕಿನ ಮಾನದಂಡದಿಂದಲೇ ತೀರ್ಮಾನಿಸಬೇಕು. ಇದೇ ಮಾನದಂಡ ಇತರ ಎಲ್ಲ ವೈಯಕ್ತಿಕ ಕಾನೂನುಗಳಿಗೂ ಅನ್ವಯಿಸುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅಗತ್ಯ ಇಲ್ಲ’ ಎಂದು ಜೇಟ್ಲಿ ಬರೆದಿದ್ದಾರೆ.
ಸಮಾನ ನಾಗರಿಕ ಸಂಹಿತೆಯ ವಿಷಯ ಬೇರೆ, ಅದಕ್ಕೂ ತ್ರಿವಳಿ ತಲಾಖ್ಗೂ ತಳಕು ಹಾಕುವ ಅಗತ್ಯ ಇಲ್ಲ ಎಂದೂ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.