'ನಾನು ದಲಿತ': ವೈರಲ್ ಆಯ್ತು ರೋಹಿತ್ ವೇಮುಲಾ ವಿಡಿಯೋ

ಜನವರಿ 17 ಆತ್ಮಹತ್ಯೆ ಮಾಡಿಕೊಂಡ, ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ತಾನು ‘ದಲಿತ’ ಎಂದು....
ರೋಹಿತ್ ವೇಮುಲ
ರೋಹಿತ್ ವೇಮುಲ

ಹೈದರಾಬಾದ್ :  ಜನವರಿ 17 ಆತ್ಮಹತ್ಯೆ ಮಾಡಿಕೊಂಡ, ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ತಾನು ‘ದಲಿತ’ ಎಂದು ಹೇಳಿಕೊಂಡಿದ್ದರು ಎನ್ನಲಾದ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

ವೇಮುಲ ಹಾಗೂ ಅವರ ಸ್ನೇಹಿತರು ಹೈದರಾಬಾದ್ ವಿವಿಯಿಂದ ಅಮಾನತುಗೊಂಡಿದ್ದಾಗ ಅಲ್ಲೇ  ಸಮೀಪದಲ್ಲಿ ವಾಸಿಸುತ್ತಿದ್ದ ಟೆಂಟ್‌ನಲ್ಲಿ ಈ ವಿಡಿಯೊ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

"ನನ್ನ ಹೆಸರು ರೋಹಿತ್ ವೇಮುಲ. ನಾನು ಗುಂಟೂರು ಜಿಲ್ಲೆಯಿಂದ ವಿದ್ಯಾಭ್ಯಾಸಕ್ಕೆ ಬಂದಿದ್ದೇನೆ. ನಾನು ದಲಿತ ಜಾತಿಯವನು. 2010ರಿಂದ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೇನೆ. ಸಮಾಜಶಾಸ್ತ್ರದಲ್ಲಿ ಪಿಹೆಚ್‌ಡಿ ಮಾಡುತ್ತಿದ್ದೇನೆ. ಇತ್ತೀಚೆಗೆ ಹೈದ್ರಾಬಾದ್ ವಿವಿ ಯಿಂದ ನಾನು ಸೇರಿ ಐವರು ದಲಿತ ವಿದ್ಯಾರ್ಥಿಗಳನ್ನು ಉಚ್ಛಾಟಿಸಿದೆ. ನಾವು ಸಾರ್ವಜನಿಕ ಸ್ಥಳ, ಹಾಸ್ಟೆಲ್‌, ವಿವಿ ಆವರಣ ಪ್ರವೇಶಿದ್ರೆ ಕ್ರಿಮಿನಲ್ ಅಪರಾಧವಂತೆ. ನನ್ನ ಕೌಟುಂಬಿಕ ಹಿನ್ನೆಲೆ ನೋಡೋದಾದ್ರೆ, ನಾನು ಕೃಷಿ ಕಾರ್ಮಿಕರ ಮಗ. 2010 ರಲ್ಲಿ MSc ಬಯೊಟೆಕ್ನಾಲಜಿಗೆ ಸೇರಿದೆ.. ಆದ್ರೆ, ಸಮಾಜಶಾಸ್ತ್ರಕ್ಕೆ ಬದಲಾವಣೆ ಮಾಡಿಕೊಂಡೆ. ಸಮಾಜದ ಬಗೆಗಿನ ಕಾಳಜಿಯಿಂದ ನಾನು ಸಮಾಜ ಶಾಸ್ತ್ರಕ್ಕೆ ಚೇಂಜ್ ಮಾಡಿಕೊಂಡೆ...ಎಂದು ಹೇಳಿಕೊಂಡಿರುವ ವಿಡಿಯೋ ಇದಾಗಿದೆ.

ನಾನು ಆಂಧ್ರಪ್ರದೇಶದ ಗುಂಟೂರಿನ ದಲಿತ ಎಂದು ತನ್ನ ಕೌಟುಂಬಿಕ ಹಿನ್ನೆಲೆ ಬಗ್ಗೆ ವೇಮುಲ ವಿವರಿಸಿರುವ ದೃಶ್ಯವಿದೆ.  ಜತೆಗೆ  ಅಮಾನತು ವಿಚಾರ, ತಮ್ಮ ಅಧ್ಯಯನ ಹಾಗೂ ವಿದ್ಯಾರ್ಥಿಗಳ ಬಗ್ಗೆ  ಮಾತನಾಡಿದ್ದು ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಜಾತಿ ತಾರತಮ್ಯಕ್ಕೆ ಬಲಿಪಶು ಆಗಿದ್ದಾನೆ ಎಂದು ಆತನ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದರು.

ನ್ಯಾ. ರೂಪನ್ ವಾಲಾ  ಆಯೋಗವು ಇತ್ತೀಚೆಗೆ ಸಲ್ಲಿಸಿದ ತನ್ನ ವರದಿಯಲ್ಲಿ ವೇಮುಲ ದಲಿತ ಅಲ್ಲ ಎಂದು ಹೇಳಿತ್ತು. ಇನ್ನು ನ್ಯಾಯಾಂಗ ಆಯೋಗವು ವರದಿ ಸಲ್ಲಿಸಿದ ಮೇಲೆ ಈ ವಿಡಿಯೋ ಬಿಡುಗಡೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ವಿಡಿಯೋವನ್ನು ಜನವರಿಯಲ್ಲಿ ಶೂಟ್ ಮಾಡಲಾಗಿತ್ತು, ಆದರೆ ಇದನ್ನು ನಾವು ಮರೆತೇ ಬಿಟ್ಟಿದ್ದೆವು. ಯಾರೋ ಒಬ್ಬರು ಇದನ್ನು ನೆನಪಿಸಿದರು. ಹೀಗಾಗಿ ಯೂ ಟ್ಯೂಬ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾಗಿ ವಿಡಿಯೋ ಅಪ್ ಲೋಡ್ ಮಾಡಿರುವ ಸನ್ನಕ್ಕಿ ಮುನ್ನ ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com