
ಅಹಮದಾಬಾದ್: "ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಹಾಗೂ ಡಾ. ಅಂಬೇಡ್ಕರ್ ಸಹ ಏಕರೂಪ ನಾಗರಿಕ ಸಂಹಿತೆ ಅಥವಾ ಸಮಾನ ನಾಗರಿಕ ಸಂಹಿತೆ ಜಾರಿಯ ಪರವಾಗಿದ್ದರು. ನಾನು ಸಹ ಏಕರೂಪ ನಾಗರಿಕ ಸಂಹಿತೆಯ ಪರವಾಗಿದ್ದೇನೆ. ಆದರೆ ಬಿಜೆಪಿ ಬೆಂಬಲಿಸುತ್ತಿದೆ ಎಂಬ ಕಾರಣಕ್ಕೆ ಪ್ರಗತಿಪರರು ಹಾಗೂ ಕಮ್ಯುನಿಷ್ಟರು ಯುಸಿಸಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ". ಇವು ಸಮಾನ ನಾಗರಿಕ ಸಂಹಿತೆ ಕುರಿತು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ವ್ಯಕ್ತಪಡಿಸಿರುವ ಅಭಿಪ್ರಾಯಗಳು.
ಗುಜರಾತ್ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯೊಂದಿಗೆ ಮಾತನಾಡಿರುವ ರಾಮಚಂದ್ರ ಗುಹಾ, ಮಹಿಳೆಯರು ಸಂಕಷ್ಟ ಎದುರಿಸದೆ ಇರಲು ಪೂರಕವಾದ ಕಾನೂನು ಜಾರಿಯಾಗಬೇಕು ಎಂದು ಹೇಳಿದ್ದು ಸಮಾನ ನಾಗರಿಕ ಸಂಹಿತೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತಿರುವ ಪ್ರಗತಿಪರರು ಹಾಗೂ ಕಮ್ಯುನಿಸ್ಟರ ಬಗ್ಗೆಯೂ ಮಾತನಾಡಿರುವ ರಾಮಚಂದ್ರ ಗುಹಾ, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಮಾಜಿ ಕಾನೂನು ಸಚಿವ ಅಂಬೇಡ್ಕರ್ ಅವರು ಸಮಾನ ನಾಗರಿಕ ಸಂಹಿತೆ ಜಾರಿಯ ಪರವಾಗಿದ್ದರು. ಆದರೆ ಈಗ ಅದನ್ನು ಬಿಜೆಪಿ ಬೆಂಬಲಿಸುತ್ತಿದೆ ಎಂಬ ಕಾರಣಕ್ಕೆ ಪ್ರಗತಿಪರರು ಕಮ್ಯುನಿಷ್ಟರು ವಿರೋಧಿಸುತ್ತಿದ್ದಾರೆ ಎಂದು ರಾಮಚಂದ್ರ ಗುಹಾ ಅಭಿಪ್ರಾಯಪಟ್ಟಿದ್ದು, ನೆಹರು, ಅಂಬೇಡ್ಕರ್ ಹೆಸರಿನಲ್ಲಿ ಅವಿವೇಕತನದ ವಾದ ಮಂಡಿಸುತ್ತಿರುವ ಜನರನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಇಚ್ಛಾ ಶಕ್ತಿ ಇದ್ದರೆ ಸಂಸತ್ ನಲ್ಲಿ ಆ ವಿಷಯವನ್ನು ಚರ್ಚೆಗೆ ತರಬೇಕು, ಲಿಂಗ ತಾರತಮ್ಯ ಹೋಗಲಾಡಿಸುವ ಆಧುನಿಕ ಸಂಹಿತೆ ಜಾರಿಯ ಅಗತ್ಯತೆ ಬಗ್ಗೆ ಸಂಸತ್ ನಲ್ಲಿ ವಿಸ್ತೃತ ಚರ್ಚೆಯಾಗಬೇಕು ಎಂದು ರಾಮಚಂದ್ರ ಗುಹಾ ಸಲಹೆ ನೀಡಿದ್ದಾರೆ.
ಇದೆ ವೇಳೆ ಕಾಶ್ಮೀರ ವಿಷಯದ ಬಗ್ಗೆಯೂ ಮಾತನಾಡಿರುವ ರಾಮಚಂದ್ರ ಗುಹಾ, ಕಾಶ್ಮೀರದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾವಿರಾರು ಜನರು ಪೆಲ್ಲೆಟ್ ಗುಂಡೇಟಿಗೆ ಗುರಿಯಾಗಿದ್ದಾರೆ. ಉರಿ ಭಯೋತ್ಪಾದಕ ದಾಳಿ ನಡೆದ ಬಳಿಕ ಕೇಂದ್ರ ಸರ್ಕಾರ ತನ್ನ ಗಮನವನ್ನು ಕಾಶ್ಮೀರಕ್ಕಿಂತ ಪಾಕಿಸ್ತಾನದೆಡೆಗೆ ಹೆಚ್ಚು ಕೇಂದ್ರೀಕರಿಸಿದೆ. ಕೇಂದ್ರ ಸರ್ಕಾರ ಕಾಶ್ಮೀರದ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕಿದ್ದು, ಕಾಶ್ಮೀರಿ ಜನತೆಯನ್ನು ತಲುಪಬೇಕಿದೆ ಎಂದು ರಾಮಚಂದ್ರ ಗುಹಾ ಹೇಳಿದ್ದಾರೆ.
Advertisement