
ಪಣಜಿ: ಪಿಒಕೆಯಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಗೆ ಆರ್ ಎಸ್ಎಸ್ ಬೋಧನೆಗಳು ಪ್ರೇರಣೆಯಾಗಿರಬಹುದು ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಯನ್ನು ಗೋವಾ ಬಿಜೆಪಿ ಬೆಂಬಲಿಸಿದೆ.
ಮನೋಹರ್ ಪರಿಕ್ಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಬಿಜೆಪಿ ವಕ್ತಾರ ಕಿರಣ್ ಕಂಡೋಲ್ಕರ್, ಸೀಮಿತ ದಾಳಿ ನಡೆಸಿರುವ ಸೇನಾ ಕಾರ್ಯಾಚರಣೆ ಅಭಿನಂದನಾರ್ಹ. ಆದರೆ ಸೀಮಿತ ದಾಳಿ ನಡೆಸಬೇಕಾದರೆ ಅದಕ್ಕೆ ಒಬ್ಬ ಮಾರ್ಗದರ್ಶಕ, ನಿರ್ದೇಶಕ ಅಗತ್ಯ ಹಾಗೂ ದಾಳಿ ನಡೆಸಿದ ಸೇನೆಯ ಬೆಂಬಲಕ್ಕೆ ಇರುವುದು ಮುಖ್ಯವಾಗುತ್ತದೆ. ದಾಳಿ ನಡೆಸಿದ ಸೇನೆಗೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ್ದು ಆರ್ ಎಸ್ ಎಸ್ ನಿಂದ ಕಲಿತ ಮನೋಹರ್ ಪರಿಕ್ಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಎಂದು ಕಿರಣ್ ಕಂಡೋಲ್ಕರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಬ್ಬರೂ ಆರ್ ಎಸ್ ಎಸ್ ನಿಂದ ತರಬೇತಿ ಪಡೆದವರು. ಆದ್ದರಿಂದ ಸೇನೆ ಸೀಮಿತ ದಾಳಿ ನಡೆಸುವುದರ ಹಿಂದೆ ಆರ್ ಎಸ್ಎಸ್ ನ ಬೋಧನೆಗಳೂ ಕೆಲಸ ಮಾಡಿರಬಹುದು ಎಂದು ಗೋವಾ ಬಿಜೆಪಿ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ. ಆರ್ ಎಸ್ಎಸ್ ನಿಂದ ಪಡೆದ ಬೋಧನೆಗಳು ಸೀಮಿತ ದಾಳಿ ನಡೆಸುವ ವೇಳೆ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೆ ಸಹಕಾರಿಯಾಗಿರುವ ಸಾಧ್ಯತೆ ಇದೆ. ಆದ್ದರಿಂದ ಮನೋಹರ್ ಪರಿಕ್ಕರ್ ಅವರ ಹೇಳಿಕೆಯನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಗೋವಾ ಬಿಜೆಪಿ ಘಟಕ ರಕ್ಷಣಾ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.
Advertisement