
ವಡೋದರ: ಕೇಂದ್ರ ಸರ್ಕಾರ ಹೊಸ ನಾಗರಿಕ ವಿಮಾನಯಾನ ನೀತಿಗಳ ಅಡಿಯಲ್ಲಿ ಜಾರಿಗೆ ತರಲಿರುವ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆಯಿಂದ ಭಾರತ ವಿಶ್ವದ ಮೂರನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಜರಾತ್ ನ ವಡೋದರಾದಲ್ಲಿ ಎರಡನೇ ಹಸಿರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ವಿಮಾನಯಾನ ಮಾಡುವ ಮಧ್ಯಮ ವರ್ಗದ ಕುಟುಂಬಗಳ ಕನಸು ಸುಲಭವಾಗಿ ಈಡೇರಲಿದ್ದು, ಪ್ರಾದೇಶಿಕ ಸಂಪರ್ಕ ಯೋಜನೆಯಿಂದ ಭಾರತ ವಿಶ್ವದ ಮೂರನೇ ಅತಿ ದೊಡ್ಡ ವಾಯುಯಾನ ಮಾರುಕಟ್ಟೆಯಾಗಿ ಪರಿವರ್ತನೆಯಾಗಲಿದೆ ಎಂದು ಹೇಳಿದ್ದಾರೆ.
ಟೈರ್ -2, ಟೈರ್-3 ಹ೦ತದ ನಗರಗಳು ವಿಮಾನಯಾನ ನಕ್ಷೆಯಲ್ಲಿ ಬರುವಂತಾದರೆ ದೇಶದ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಈ ಹಿಂದಿನ ಕೇಂದ್ರ ಸರ್ಕಾರಗಳಿಗೆ ವಿಮಾನಯಾಕ್ಕೆ ಸಂಬಂಧಿಸಿದಂತೆ ದೂರದೃಷ್ಟಿ ಇರಲಿಲ್ಲ, ನಮ್ಮ ಸರ್ಕಾರ ವಿಮಾನಯಾನ ಕ್ಷೇತ್ರವನ್ನು ವಿಸ್ತರಿಸುವುದಕ್ಕೆ ಅವಿರತ ಶ್ರಮದಿಂದ ಕೆಲಸ ನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟೈರ್-2, ಟೈರ್-3 ಹಂತದ ನಗರಗಳಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆಯನ್ನು ತರುವುದರಿಂದ 500 ಕಿಮಿ ದೂರದ ವರೆಗೆ ಜನರು ಕೇವಲ 2,500 ರೂ ಗಳ ಟಿಕೆಟ್ ದರದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
Advertisement