
ನವದೆಹಲಿ: ಬಿಹಾರದಲ್ಲಿ ತನ್ನ ಎಸ್ ಯುವಿ ಕಾರು ಓವರ್ಟೇಕ್ ಮಾಡಿದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಉಚ್ಚಾಟಿತ ಜೆಡಿಯು ಎಂಎಲ್ ಸಿ ಮನೋರಮಾ ಪುತ್ರ ರಾಕಿ ಯಾದವ್ ಅವರಿಗೆ ಜಾಮೀನು ನೀಡಿದ್ದ ಪಾಟ್ನಾ ಹೈಕೋರ್ಟ್ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೀಗಾಗಿ ಆರೋಪಿ ಮತ್ತೆ ಜೈಲು ಸೇರುವಂತಾಗಿದೆ.
ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿದ ಬಿಹಾರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರ ನೇತೃತ್ವದ ಸುಪ್ರೀಂ ಪೀಠ, ಜಾಮೀನಿಗೆ ತಡೆಯಾಜ್ಞೆ ನೀಡಿ, ಪ್ರತಿಕ್ರಿಯೆ ಸಲ್ಲಿಸುವಂತೆ ಆರೋಪಿಗೆ ಸೂಚಿಸಿ ವಿಚಾರಣೆಯನ್ನು ದೀಪಾವಳಿ ನಂತರ ಮುಂದೂಡಿದೆ.
ಬಿಹಾರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ದತ್ ಅವರು ತಕ್ಷಣವೇ ರಾಕಿ ಯಾದವ್ ಅವರ ಜಾಮೀನು ರದ್ದುಗೊಳಿಸಬೇಕು ಅಥವಾ ಪಾಟ್ನಾ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ತನ್ನ ಕಾರಿಗೆ ದಾರಿ ಕೊಡಲಿಲ್ಲ ಎಂಬ ಕಾರಣಕ್ಕೆ ರಾಕಿ ಯಾದವ್, ಆದಿತ್ಯ ಸಚದೇವ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಘಟನೆ ಕಳೆದ ಮೇ 7ರಂದು ಬಿಹಾರದ ಗಯಾದಲ್ಲಿ ನಡೆದಿತ್ತು.
Advertisement