
ಭೋಪಾಲ್: ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡು ಪೋಲೀಸರ ಎನ್ ಕೌಂಟರ್ ಗೆ ಬಲಿಯಾದ ಸಿಮಿ ಉಗ್ರ ಸಂಘಟನೆಯ ಉಗ್ರರ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ.
ಪೋಲೀಸರ ಗುಂಡೇಟಿಗೆ ಬಲಿಯಾದ ಉಗ್ರರು, ತೆಲಂಗಾಣ, ಚೆನ್ನೈ, ಕರ್ನಾಟಕದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಜೈಲಿನಿಂದ ಪರಾರಿಯಾಗಿದ್ದ ಉಗ್ರರ ಪೈಕಿ ಮೂವರು ಉಗ್ರರು ಕರ್ನಾಟಕದ ಧಾರವಾಡದಲ್ಲಿ ಕೆಲಕಾಲ ವಾಸವಾಗಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.
ತೆಲಂಗಾಣದಲ್ಲಿ 2014 ರ ಫೆಬ್ರವರಿ 1 ರಂದು ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣ, ಚೆನ್ನೈ ನ ಸೆಂಟ್ರಲ್ ರೈಲ್ವೆ ಸ್ಟೇಷನ್ ನಲ್ಲಿ ಬೆಂಗಳೂರು- ಗುವಾಹಟಿ ರೈಲಿನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ, 2014 ಮೇ, ಜುಲೈ ನಲ್ಲಿ ಪುಣೆಯ ಪೋಲಿಸ್ ಠಾಣೆಗಳ ಬಳಿ ನಡೆದ ಸ್ಫೋಟ ಪ್ರಕರಣಗಳಲ್ಲೂ ಇದೆ ಸಿಮಿ ಉಗ್ರರ ತಂಡ ಭಾಗಿಯಾಗಿತ್ತು ಎಂದು ಶಂಕಿಸಲಾಗಿದೆ. ಇದೆ ಸಿಮಿ ಉಗ್ರರ ತಂಡ ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶಗಳಲ್ಲಿನ ಬಾಂಬ್ ಸ್ಫೋಟ ಪ್ರಕರಣಗಳಲ್ಲೂ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭೋಪಾಲ್ ಐಜಿ ಯೋಗೇಶ್ ಚೌಧರಿ ಸುದ್ದಿಗೋಷ್ಠಿ:
ಉಗ್ರರ ಎನ್ ಕೌಂಟರ್ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿ ಯೋಗೇಶ್ ಚೌಧರಿ, ಎನ್ ಕೌಂಟರ್ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದು, ಜೈಲಿನಿಂದ ತಪ್ಪಿಸಿಕೊಂಡಿದ್ದ ಉಗ್ರರು ಪೋಲೀಸರ ಮೇಲೆ ದಾಳಿ ನಡೆಸಿದರು, ಆದ್ದರಿಂದ ಪೊಲೀಸರು ಸಹ ಪ್ರತಿ ದಾಳಿ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ.
ಉಗ್ರರನ್ನು 45 ಸುತ್ತು ಗುಂಡು ಹಾರಿಸಿ ಉಗ್ರರನ್ನು ಹೊಡೆದುರುಳಿಸಿದ್ದೇವೆ, ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರು ಗಾಯಾಗೊಂಡಿದ್ದಾರೆ. ಉಗ್ರರ ಬಳಿ 2 ಚಾಕು 3 ನಾದ ಪಿಸ್ತೂಲು ಪತ್ತೆಯಾಗಿದ್ದು ಮೊಬೈಲ್ ಇರಲಿಲ್ಲ, ಭಯೋತ್ಪಾದಕರ ಬಳಿ ಮತ್ತಷ್ಟು ಮಾರಾಕಾಸ್ತ್ರಗಳಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಯೋಗೇಶ್ ಚೌಧರಿ ಹೇಳಿದ್ದಾರೆ.
Advertisement