ಇಟಾವಾ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೈಫಾಯಿಯ ತಮ್ಮ ಪೂರ್ವಜರ ಗ್ರಾಮದಲ್ಲಿ ಜನತಾ ದರ್ಬಾರ್ ನಡೆಸುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ಅಖಿಲೇಶ್ ಯಾದವ್ ಅವರು ತಂಗಿದ್ದ ಪಿಡಬ್ಲ್ಯೂಡಿ ಅತಿಥಿ ಗೃಹದ ಹೊರಗಡೆ ಜನತಾ ದರ್ಬಾರ್ ನಡೆಸುತ್ತಿದ್ದ ವೇಳೆ ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕಿಶನ್ ಯಾದವ್ ಅವರು ತಿಳಿಸಿದ್ದಾರೆ.
ಜನರ ಗುಂಪನ್ನು ನಿಯಂತ್ರಿಸುವುದಕ್ಕಾಗಿ ಮುಖ್ಯ ಗೇಟ್ ಅನ್ನು ಬಂದ್ ಮಾಡಲಾಗಿತ್ತು. ಆದರೆ ವಿಐಪಿ ಕಾರ್ ಗಳಿಗಾಗಿ ಗೇಟ್ ತೆಗೆದಾಗ ಭಾರಿ ಸಂಖ್ಯೆಯ ಜನ ಒಮ್ಮೆಲೇ ನುಗ್ಗಿ ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಕನೂಜ್ ಜಿಲ್ಲಾ ಪಂಚಾಯತ್ ಮುಖ್ಯಸ್ಥ ಸಂತೋಶ್ ಯಾದವ್ ಅವರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಓರ್ವ ವ್ಯಕ್ತಿಗೆ ತಲೆಗೆ ಪೆಟ್ಟು ಬಿದ್ದಿದೆ. ಅಲ್ಲದೆ ಕೆಲವು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.