ನವದೆಹಲಿ: ಸೆಕ್ಸ್ ಸಿಡಿ ಬಹಿರಂಗಗೊಂಡ ನಂತರ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಿಂದ ವಜಾಗೊಂಡಿದ್ದ ಆಪ್ ಸಂದೀಪ್ ಕುಮಾರ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಈ ಸಂಬಂಧ ಆಪ್ ಉಚ್ಚಾಟಿತ ಶಾಸಕ ಶನಿವಾರ ದೆಹಲಿ ಪೊಲೀಸರಿಗೆ ಶರಣಾಗಿದ್ದಾರೆ.
ಇಂದು ಮಧ್ಯಾಹ್ನವಷ್ಟೇ ಸೀಡಿಯಲ್ಲಿರುವ ಮಹಿಳೆ ಮಾಜಿ ಸಚಿವ ಸಂದೀಪ್ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂದೀಪ್ ಕುಮಾರ್ ಅವರು ಇಂದು ಸಂಜೆ ಉಪ ಪೊಲೀಸ್ ಆಯುಕ್ತೆ ರೋಹಿಣಿ ಅವರ ಕಚೇರಿಯಲ್ಲಿ ಶರಣಾಗಿದ್ದಾರೆ. ಅಲ್ಲದೆ ದೂರು ನೀಡಿದ ಮಹಿಳೆಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ರೇಷನ್ ಕಾರ್ಡ್ ಪಡೆಯಲು ಸಹಾಯ ಕೋರಿ ನಾನು ಸಚಿವರ ಬಳಿ ಹೋಗಿದ್ದೆ. ಈ ವೇಳೆ ಅವರು ನನಗೆ ಮತ್ತು ಬರುವ ಪಾನೀಯ ನೀಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಅವರು ಸಚಿವರಾದಮೇಲೆಯೇ ಆ ಸಿಡಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಆಮ್ ಆದ್ಮಿ ಪಕ್ಷ ಸಂದೀಪ್ ಕುಮಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಳಿಸಿದ ಬೆನ್ನಲ್ಲೇ ಮಹಿಳೆ ಅವರ ವಿರುದ್ಧ ದೂರು ನೀಡಿದ್ದರು.
ಕಳೆದ ಬುಧವಾರ ಸಂದೀಪ್ ಕುಮಾರ್ ಅವರು ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಿರುವ ಸಿಡಿಯೊಂದು ಬಹಿರಂಗವಾಗುತ್ತಿದ್ದಂತೆ ಸಿಎಂ ಕೇಜ್ರಿವಾಲ್ ಅವರು ಸಂದೀಪ್ ಅವರನ್ನು ತಮ್ಮ ಸಂಪುಟದಿಂದ ವಜಾ ಮಾಡಿದ್ದರು.