ಭಾರತದಲ್ಲಿ ಪ್ರತಿ 10 ಶಿಕ್ಷಕರಲ್ಲಿ ಒಬ್ಬರು ಪದವೀಧರರಲ್ಲ: ಅಧ್ಯಯನ

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಇತ್ತೀಚೆಗೆ ಬಹಿರಂಗಪಡಿಸಿದ ವರದಿಯಂತೆ ಭಾರತದಲ್ಲಿ 10ರಲ್ಲಿ ಒಬ್ಬ ಶಿಕ್ಷಕರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚೆನ್ನೈ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಇತ್ತೀಚೆಗೆ ಬಹಿರಂಗಪಡಿಸಿದ ವರದಿಯಲ್ಲಿ, ಪ್ರತಿ 10 ಶಿಕ್ಷಕರಲ್ಲಿ ಒಬ್ಬರು ಪದವಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುರಿತ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ವಿವಿಧ ಸಂಘಟನೆಗಳು 2012-13 ಮತ್ತು 2015-16ರ ಮಧ್ಯೆ ತಯಾರಿಸಿದ ಅಧ್ಯಯನಗಳ ಆಧಾರದ ಮೇಲೆ 'ಶಿಕ್ಷಕರ ಗುಣಲಕ್ಷಣಗಳು' ಎಂಬ ಶೀರ್ಷಿಕೆಯಡಿ ವರದಿಯನ್ನು ತಯಾರಿಸಿದ್ದು, ಇದನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಬಿಡುಗಡೆ ಮಾಡಿದೆ.
ಭಾರತದಲ್ಲಿ ಪ್ರೌಢ ಶಿಕ್ಷಣ ಹೆಚ್ಚಿಸುವ ಯೋಜನೆ ನಿಟ್ಟಿನಲ್ಲಿ ಈ ಅಧ್ಯಯನ ನಡೆಸಲಾಗಿದೆ. ಸರ್ಕಾರದ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಪ್ರಶ್ನೆಗಳನ್ನು ನೀಡಲಾಗಿದ್ದು, ಅದರಲ್ಲಿ ಅವರ ಶೈಕ್ಷಣಿಕ ಅರ್ಹತೆ ಮತ್ತು ಇನ್ನು ಕೆಲವು ಮಾನದಂಡಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಅದರಲ್ಲಿ ಬಂದ ಫಲಿತಾಂಶಗಳು ನಿಜಕ್ಕೂ ಆಘಾತವನ್ನುಂಟುಮಾಡಿದೆ. ಮಾಧ್ಯಮಿಕ ಶಾಲೆಗಳಲ್ಲಿನ ಶೇಕಡಾ 14ರಷ್ಟು ಶಿಕ್ಷಕರು ಪದವಿ ಹೊಂದಿಲ್ಲ, ಇನ್ನು ಕೆಲ ಶಿಕ್ಷಕರು ದ್ವಿತೀಯ ಪಿಯುಸಿ ಪರೀಕ್ಷೆಯನ್ನೇ ಪಾಸು ಮಾಡಿಕೊಂಡಿಲ್ಲ ಎಂದು ವರದಿ ಹೇಳಿದೆ.
ಪದವಿ ಪೂರ್ಣಗೊಳಿಸಿದ ಶಿಕ್ಷಕರಲ್ಲಿ ಅವರು ಪದವಿಯಲ್ಲಿ ಕಲಿತ ವಿಷಯಗಳನ್ನು ಮಕ್ಕಳಿಗೆ ಪಾಠ ಮಾಡುತ್ತಿಲ್ಲ. ಉದಾಹರಣೆಗೆ ಶೇಕಡಾ 30ರಷ್ಟು ಗಣಿತ ಶಿಕ್ಷಕರು ತಮ್ಮಪದವಿಯಲ್ಲಿ ಗಣಿತವನ್ನು ಕಲಿತಿರುವುದಿಲ್ಲ. ಅದೇ ರೀತಿ ಕಾಲು ಭಾಗ ವಿಜ್ಞಾನ ಶಿಕ್ಷಕರು ಕಾಲೇಜಿನಲ್ಲಿ ವಿಜ್ಞಾನ ಕಲಿತಿಲ್ಲ. ಶಿಕ್ಷಕರು ತಾವು ಕಲಿತಿಲ್ಲದ ವಿಷಯಗಳನ್ನು ಮಕ್ಕಳಿಗೆ ಕಲಿಸುವುದರಿಂದ ಪ್ರತಿಭೆಯ ಪಲಾಯನವಾಗುತ್ತದೆ ಜೊತೆಗೆ ಆ ವಿಷಯದಲ್ಲಿ ಸಾಕಷ್ಟು ಜ್ಞಾನ ಹೊಂದಿಲ್ಲದಿರುವುದರಿಂದ ನಿರೀಕ್ಷಿತ ಗುಣಮಟ್ಟದಲ್ಲಿ ಮಕ್ಕಳಿಗೆ ಕಲಿಸಲು ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಶಿಕ್ಷಕರನ್ನು ವ್ಯವಸ್ಥಿತ ರೀತಿಯಲ್ಲಿ ನೇಮಕಾತಿ ಮಾಡಿ ಅವರಿಂದ ಗುಣಮಟ್ಟದ ಬೋಧನೆಯನ್ನು ಪಡೆಯಬೇಕು ಎಂದು ಸಲಹೆ ನೀಡಲಾಗಿದೆ.
ಇನ್ನು ವಿಜ್ಞಾನ, ಗಣಿತದಂತಹ ವಿಷಯಗಳನ್ನು ಬೋಧಿಸಲು ಬಿ.ಎಡ್, ಎಂ.ಎಡ್ ಅಥವಾ ಅದಕ್ಕೆ ಸಮನಾದ ವೃತ್ತಿಪರ ಕೋರ್ಸ್ ಗಳನ್ನು ಕಲಿತು ಶಾಲೆಗಳಲ್ಲಿ ಶಿಕ್ಷಕರಾಗಿ ಸೇರಬೇಕು. ಶೇಕಡಾ 15 ಶಿಕ್ಷಕರಲ್ಲಿ ಈ ಅರ್ಹತೆಗಳಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿಕ್ಷಣ ಮತ್ತು ತರಬೇತಿ ಜಿಲ್ಲಾ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಮಧು ಪ್ರಸಾದ್ ಹೇಳುವ ಪ್ರಕಾರ, ಇಲ್ಲಿ ಶಿಕ್ಷಕರನ್ನು ದೂರುವ ಹಾಗಿಲ್ಲ. ಅತ್ಯಲ್ಪ ಸಂಬಳ ನೀಡಿ ಅರ್ಹತೆಯಿಲ್ಲದ ಶಿಕ್ಷಕರನ್ನು ನೇಮಿಸುವುದನ್ನು ಮೊದಲು ಕೇಂದ್ರ ಸರ್ಕಾರ ನಿಲ್ಲಿಸಬೇಕು. ಗ್ರಾಮೀಣ ಮಟ್ಟದಲ್ಲಿ ಕಳಪೆ ಗುಣಮಟ್ಟದ ಶಿಕ್ಷಕರನ್ನು ನೇಮಿಸುವ ಬದಲು ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ಹೆಚ್ಚಿಸಿ ಸರಿಯಾದ ತರಬೇತಿ ನೀಡಿ ಗುಣಮಟ್ಟದ ಶಿಕ್ಷಕರನ್ನು ನೇಮಿಸಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com