ವಜಾಗೊಂಡ ಸಚಿವ ಸಂದೀಪ್ ಕುಮಾರ್ ಮತ್ತು ಅವರ ಪತ್ನಿ ರಿಟು(ಸಂಗ್ರಹ ಚಿತ್ರ)
ದೇಶ
ನನ್ನ ಪತಿ ಮುಗ್ಧ, ಇದೊಂದು ರಾಜಕೀಯ ಪಿತೂರಿ: ವಜಾಗೊಂಡ ಸಚಿವ ಸಂದೀಪ್ ಕುಮಾರ್ ಪತ್ನಿ
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿರುವ ವಜಾಗೊಂಡ ಸಚಿವ...
ನವದೆಹಲಿ: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿರುವ ವಜಾಗೊಂಡ ಸಚಿವ ಸಂದೀಪ್ ಕುಮಾರ್ ಅವರ ಪತ್ನಿ ತಮ್ಮ ಪತಿಯ ಬೆಂಬಲಕ್ಕೆ ನಿಂತಿದ್ದು, ಲೈಂಗಿಕ ಹಗರಣದಲ್ಲಿ ಅವರನ್ನು ತಪ್ಪಾಗಿ ತಳಕುಹಾಕಲಾಗಿದೆ ಎಂದು ಹೇಳಿದ್ದಾರೆ.
''ನನ್ನ ಪತಿ ಮುಗ್ಧರು. ಅವರ ಪರವಾಗಿ ನಾನು ನಿಲ್ಲುತ್ತೇನೆ. ನನ್ನ ಪತಿ ವಿರುದ್ಧ ತಪ್ಪಾಗಿ ಲೈಂಗಿಕ ಆರೋಪ ಮಾಡಲಾಗಿದೆ ಎಂದು ದೆಹಲಿ ಸರ್ಕಾರದಿಂದ ವಜಾಗೊಂಡ ಸಚಿವ ಸಂದೀಪ್ ಕುಮಾರ್ ಅವರ ಪತ್ನಿ ರಿಟು ಕುಮಾರ್ ಹೇಳಿದ್ದಾರೆ.
ಸಂದೀಪ್ ಕುಮಾರ್ ನನ್ನು ನಿನ್ನೆ ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಕೋರ್ಟ್ ಒಂದು ದಿನಕ್ಕೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಆಮ್ ಆದ್ಮಿ ಪಕ್ಷ ಅವರ ಪಕ್ಷದ ಸದಸ್ಯತ್ವದಿಂದ ತೆಗೆದುಹಾಕಿದ್ದು, ಸಂದೀಪ್ ಕುಮಾರ್ ಅಪರಾಧಿ ಎಂದು ಸಾಬೀತಾದರೆ ಗಂಭೀರ ಶಿಕ್ಷೆ ನೀಡಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಿಫಾರಸ್ಸು ಮಾಡಿದ್ದಾರೆ.
'' ತಮ್ಮ ಪತಿ ವಿರುದ್ಧ ಮಾಡುತ್ತಿರುವ ಆರೋಪ ರಾಜಕೀಯ ಪಿತೂರಿಯಾಗಿದ್ದು, ತಮ್ಮ ಪತಿ ಮುಗ್ಧರು. ಈ ಪರಿಸ್ಥಿತಿಯಲ್ಲಿ ಇಡೀ ಕುಟುಂಬ ಅವರ ಬೆಂಬಲಕ್ಕೆ ನಿಲ್ಲುತ್ತದೆ'' ಎಂದು ರಿಟಾ ಕುಮಾರ್ ಹೇಳಿದ್ದಾರೆ.
ಸಂದೀಪ್ ಕುಮಾರ್ ವಿರುದ್ಧ ದೂರು ನೀಡಿದ ಮಹಿಳೆ ಹಿಮಾಚಲ ಪ್ರದೇಶದವರಾಗಿದ್ದು, ಕಳೆದ 20 ವರ್ಷಗಳಿಂದ ದೆಹಲಿಯಲ್ಲಿ ವಾಸಿಸುತ್ತಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆಕೆ ದೂರಿನಲ್ಲಿ, ತಾನು ಸಚಿವ ಸಂದೀಪ್ ಕುಮಾರ್ ಬಳಿಗೆ 11 ತಿಂಗಳ ಹಿಂದೆ ರೇಷನ್ ಕಾರ್ಡಿಗಾಗಿ ಹೋಗಿದ್ದಾಗ ಪಾನೀಯವನ್ನು ಕುಡಿಯಲು ಕೊಟ್ಟರು. ಆ ಬಳಿಕ ತಾನು ಮೂರ್ಛೆ ತಪ್ಪಿ ಬಿದ್ದೆ. ಸಚಿವ ಸಂದೀಪ್ ಕುಮಾರ್ ನಂತರ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ಅದನ್ನು ಚಿತ್ರೀಕರಿಸಿದ್ದರು ಎಂದು ವಿವರಿಸಿದ್ದಾರೆ.
ದೆಹಲಿ ಸರ್ಕಾರದ ಅತ್ಯಂತ ಚಿಕ್ಕ ವಯಸ್ಸಿನ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದ ಸಂದೀಪ್ ಕುಮಾರ್, ಅತ್ಯಾಚಾರ, ಲೈಂಗಿಕ ದುರ್ಬಳಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ