ಕಾಶ್ಮೀರದಲ್ಲಿ ಶಾಂತಿ ಜಾಥಾಗಾಗಿ ಸೂಫಿಗಳ ಪ್ರಸ್ತಾವನೆ: ನೇತೃತ್ವ ವಹಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ

ಕಾಶ್ಮೀರದಲ್ಲಿ ಅಶಾಂತಿ ಉಂಟಾಗಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಸೂಫಿಗಳ ನಿಯೋಗ, ಕಾಶ್ಮೀರದಲ್ಲಿ ಶಾಂತಿಗಾಗಿ ಜಾಥಾ ನಡೆಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಕಾಶ್ಮೀರದಲ್ಲಿ ಅಶಾಂತಿ ಉಂಟಾಗಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಸೂಫಿಗಳ ನಿಯೋಗ, ಕಾಶ್ಮೀರದಲ್ಲಿ ಶಾಂತಿಗಾಗಿ ಜಾಥಾ ನಡೆಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಶಾಂತಿಗಾಗಿ ಕಾಶ್ಮೀರದಲ್ಲಿ ನಡೆಸಲಾಗಿರುವ ಸೂಫಿಗಳ ಜಾಥಾದ ನೇತೃತ್ವ ವಹಿಸುವಂತೆ ಸೂಫಿಗಳ ನಿಯೋಗ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದು, ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವುದಕ್ಕೆ ಸೂಫಿಗಳ ಮಾರ್ಗ ನೆರವಾಗಲಿದೆ ಎಂದು ನಿಯೋಗದ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಕಾಶ್ಮೀರದ ವಿಷಯವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇವೆ, ಕಾಶ್ಮೀರದಲ್ಲಿ ಸೇನಾಪಡೆ ಮೇಲೆ ಕಲ್ಲು ತೂರಾಟ ಮಾಡುತ್ತಿರುವ ಯುವಕರಿಗೆ ಅವರ ತಪ್ಪನ್ನು ಅರ್ಥಮಾಡಿಸುವುದು ನಮ್ಮ ಉದ್ದೇಶವಾಗಿದ್ದು, ಇದಕ್ಕಾಗಿ ಶಾಂತಿ ಜಾಥಾ ನಡೆಸಲು ಉದ್ದೇಶಿಸಲಾಗಿದೆ, ಶಾಂತಿಗಾಗಿ ನಡೆಯುವ ಜಾಥಾಗೆ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ಸೂಫಿ ನಿಯೋಗದ ಮುಖ್ಯಸ್ಥ, ಗರೀಬ್ ನವಾಜ್ ಫೌಂಡೇಶನ್ ನ ಮೌಲಾನಾ ಅನ್ಸರ್ ರಾಜಾ ಹೇಳಿದ್ದಾರೆ. 
ದೇಶದ ವಿವಿಧ ಭಾಗಗಳ ಸೂಫಿ ಸಂತರೂ ಕಾಶ್ಮೀರದಲ್ಲಿ ಶಾಂತಿಗಾಗಿ ನಡೆಸಲು ಉದ್ದೇಶಿಸಲಾಗಿರುವ ಜಾಥಾದಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ತ್ರಿವರ್ಣ ಧ್ವಜ ಹಾಗೂ ಕುರಾನ್ ಹಿಡಿದು ಶಾಂತಿಗಾಗಿ ಜಾಥಾ ನಡೆಸಲಾಗುವುದು, ಈ ಮೂಲಕ ಸೇನಾಪಡೆ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ಯುವಕರಿಗೆ ಹದಿತ್, ಕುರಾನ್ ನ ಸಂದೇಶವನ್ನು ನಿಜವಾದ ಅಹಿಂಸಾ ಸಂದೇಶವನ್ನು ಅರ್ಥ ಮಾಡಿಸಲಾಗುವುದು ಎಂದು ಅನ್ಸರ್ ರಾಜಾ ತಿಳಿಸಿದ್ದಾರೆ.
 ಇನ್ನು ಸೂಫಿಗಳ ನಿಯೋಗ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆಯನ್ನು ನಿರಾಕರಿಸಿದ್ದು, ಪಾಕಿಸ್ತಾನಕ್ಕೆ ಜೈಕಾರ ಹಾಕುವ ಪ್ರತ್ಯೇಕತಾವಾದಿಗಳೊಂದಿಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿರುವ ನೆರವನ್ನು ವಾಪಸ್ ಪಡೆಯುವ ಸರ್ಕಾರದ ಚಿಂತನೆಗೆ ಸೂಫಿಗಳ ನಿಯೋಗ ಬೆಂಬಲ ವ್ಯಕ್ತಪಡಿಸಿದ್ದು, ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com