
ಮುಂಬೈ: ಹರಿಯಾಣ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಜೈನ ಗುರು ತರುಣ್ ಸಾಗರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಖ್ಯಾತ ಗಾಯಕ, ಸಂಗೀತ ನಿರ್ದೇಶಕ, ಆಮ್ ಆದ್ಮಿ ಪಕ್ಷದ ಬೆಂಬಲಿಗ ವಿಶಾಲ್ ದದ್ಲಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಜೈನ ಗುರುಗಳ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ವಿಶಾಲ್ ದಾದ್ಲಾನಿಗೆ ಬಂಧನದಿಂದ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಜೈನ ಗುರುವಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್ಐಆರ್ ನ್ನು ರದ್ದುಗೊಳಿಸುವಂತೆ ಕೋರಿದ್ದ ದಾದ್ಲಾನಿ ಅರ್ಜಿಯನ್ನು ನ್ಯಾ.ವಿ ಗೋಪಾಲ್ ಗೌಡ, ಆದರ್ಶ್ ಕುಮಾರ್ ಗೋಯಲ್ ಅವರ ವಿಭಾಗೀಯ ಪೀಠ ಅರ್ಜಿಯನ್ನು ತಿರಸ್ಕರಿಸಿದ್ದು, ನಿರೀಕ್ಷಣಾ ಜಾಮೀನು ನೀಡಲು ನಿರಾಕಾರಿಸಿದೆ.
ತರುಣ್ ಸಾಗರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ದಾದ್ಲಾನಿ ವಿರುದ್ಧ ದೆಹಲಿಯ ಶಹದ್ರಾ ಪೊಲೀಸ್ ಠಾಣೆಯಲ್ಲಿ ಜೈನ ಸಮುದಾಯದವರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ದಿಗಂಬರ ಮುನಿಗಳಾಗಿರುವ ತರುಣ್ ಸಾಗರ್ ಅವರು ನಗ್ನವಾಗಿ ಹರಿಯಾಣ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ್ದಕ್ಕೆ ವಿಶಾಲ್ ದದ್ಲಾನಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು.
Advertisement