ರೈಲ್ವೆ ದರ ಏರಿಕೆ 'ತುಘಲಕಿ ಫರ್ಮಾನ್' ಎಂದ ಕಾಂಗ್ರೆಸ್; ಹಿಂಪಡೆಯುವುದಕ್ಕೆ ಆಗ್ರಹ
ಬೇಡಿಕೆಗನುಗುಣವಾಗಿ ರೈಲ್ವೆ ಟಿಕೆಟ್ ದರ ಏರಿಕೆಯ ಆದೇಶವನ್ನು ನರೇಂದ್ರ ಮೋದಿ ಆಡಳಿತದ 'ತುಘಲಕಿ ಫರ್ಮಾನ್' (ತುಘಲಕ್ ಆದೇಶ) ಎಂದು ಕರೆದಿರುವ ಕಾಂಗ್ರೆಸ್ ಪಕ್ಷ, ಈ ನಿರ್ಣಯವನ್ನು ಹಿಂಪಡೆಯುವುದಕ್ಕೆ
ನವದೆಹಲಿ: ಬೇಡಿಕೆಗನುಗುಣವಾಗಿ ರೈಲ್ವೆ ಟಿಕೆಟ್ ದರ ಏರಿಕೆಯ ಆದೇಶವನ್ನು ನರೇಂದ್ರ ಮೋದಿ ಆಡಳಿತದ 'ತುಘಲಕಿ ಫರ್ಮಾನ್' (ತುಘಲಕ್ ಆದೇಶ) ಎಂದು ಕರೆದಿರುವ ಕಾಂಗ್ರೆಸ್ ಪಕ್ಷ, ಈ ನಿರ್ಣಯವನ್ನು ಹಿಂಪಡೆಯುವುದಕ್ಕೆ ಆಗ್ರಹಿಸಿದೆ.
"ಅಗತ್ಯ ವಸ್ತುಗಳ ದರ ಏರಿಕೆ ಮತ್ತು ಏರುತ್ತಿರುವ ಆಹಾರ ಹಣದುಬ್ಬರದ ವಿರುದ್ಧ ಹೋರಾಡುತ್ತಿದ್ದೇವೆ, ಈಗ ಮೋದಿ ಸರಕಾರದ ಹೊಸ ನಿರ್ಧಾರದಂತೆ ರಾಜಧಾನಿ, ಡ್ಯೂರಾಂಟೊ ಮತ್ತು ಶತಾಬ್ದಿ ರೈಲುಗಳಲ್ಲಿ ಬೇಡಿಕೆಗನುಗುಣವಾಗಿ ರೈಲ್ವೆ ಟಿಕೆಟ್ ದರ ಏರಿಕೆಯ ಆದೇಶ ಭಾರತದ ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸಿದೆ" ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಎಸ್ ಸುರ್ಜೆವಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ತಮ್ಮ ತಪ್ಪುಗಳನ್ನು ಅರಿತು ಈ 'ತುಘಲಕಿ ಫರ್ಮಾನ್'ನನ್ನ ಕೂಡಲೇ ಹಿಂಪಡೆಯಬೇಕು" ಎಂದು ಕೂಡ ಅವರು ಆಗ್ರಹಿಸಿದ್ದಾರೆ.
ಮೂರು ಉನ್ನತ ದರ್ಜೆಯ ರೈಲುಗಳಲ್ಲಿ ಬೇಡಿಕೆಗನುಗುಣವಾಗಿ ರೈಲ್ವೆ ಟಿಕೆಟ್ ದರ ಏರಿಕೆಯ ಆದೇಶವನ್ನು ಭಾರತೀಯ ರೈಲ್ವೆ ಘೋಷಿಸಿದ ಒಂದು ದಿನದ ನಂತರ ಸುರ್ಜೆವಾಲಾ ಪ್ರತಿಕ್ರಿಯಿಸಿದ್ದಾರೆ.
ಈ ಹೊಸ ಆದೇಶದ ಪ್ರಕಾರ 10% ಟಿಕೆಟ್ ಗಳು ಮಾರಾಟವಾದ ನಂತರ ಟಿಕೆಟ್ ಬೆಲೆಗಳು ಹಂತ ಹಂತವಾಗಿ 50% ಗೂ ಹೆಚ್ಚಾಗಲಿವೆ. "ಈಗ ಮಧ್ಯಮ ವರ್ಗದ ಜನರ ಜೇಬುಗಳಿಂದ 1000 ಕೋಟಿ ಕಸಿಯುವ ಹುನ್ನಾರ ಇದು" ಎಂದಿರುವ ಅವರು "ಎಷ್ಟೇ ತೊಂದರೆಗಳಿದ್ದರು ಪ್ರಯಾಣಕ್ಕಾಗಿ ಈ ಜನ ರೈಲ್ವೆ ಇಂದಿಗೂ ಹಣ ಉಳಿಸುವ ಮಾರ್ಗ ಎಂದು ನಂಬಿದ್ದಾರೆ" ಎಂದು ಹೇಳಿದ್ದಾರೆ.
ದಸರಾ, ದೀಪಾವಳಿ, ಛತ್ ಪೂಜಾ, ಓಣಂ, ಬಕ್ರೀದ್ ಈ ಹಬ್ಬಗಳಿಗೂ ಮುಂಚಿತವಾಗಿ ರೈಲ್ವೆ ಈ ಆದೇಶ ಹೊರಡಿಸಿರುವುದು ಮೋದಿ ಸರ್ಕಾರದ ಜನವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕೂಡ ಸುರ್ಜೆವಾಲಾ ಟೀಕಿಸಿದ್ದಾರೆ.