ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಿಂದಾಗಿ ಕರ್ನಾಟಕ ಮತ್ತು ತಮಿಳು ನಾಡು ರಾಜ್ಯಗಳಲ್ಲಿ ಆಕ್ರೋಶದ ಕಿಡಿ ಎಲ್ಲೆಡೆ ಹೊತ್ತಿ ಉರಿಯುತ್ತಿತ್ತು.
ತಮಿಳುನಾಡಿನ ಹಲವು ವಾಹನಗಳಿಗೆ ಕರ್ನಾಟಕದಲ್ಲಿ ಬೆಂಕಿ ಹಚ್ಚಲಾಗಿತ್ತು, ತಮಿಳುನಾಡಿನಲ್ಲು ಕೂಡ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿತ್ತು. ಬೆಂಗಳೂರಿಗೆ ಬರುತ್ತಿದ್ದ ಕರ್ನಾಟಕದ ವಾಹನಗಳನ್ನು ತಮಿಳುನಾಡು ಪೊಲೀಸರು ಬಚಾವ್ ಮಾಡಿದ ಕಾರ್ಯ ವೈಖರಿ ಪ್ರಶಂಸೆಗೆ ಪಾತ್ರವಾಗಿದೆ.
ಜಾಯಲ್ ಬಿಂದು ಎಂಬುವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ವಿಷಯದ ಪ್ರಕಾರ, ಕರ್ನಾಟಕ ನೋಂದಣಿ ಸಂಖ್ಯೆಯುಳ್ಳ ವಾಹನಗಳಿಗೆ ಏನು ತೊಂದರೆಯಾಗದಂತೆ ತಮಿಳುನಾಡು ಪೊಲೀಸರು ರಕ್ಷಣೆ ನೀಡಿ ಸುರಕ್ಷಿತವಾಗಿ ರಾಜ್ಯ ತಲುಪುವಂತೆ ಮಾಡಿದ್ದಾರೆ. ಸುಮಾರು 350 ಕಿಮೀ ದೂರ ಕರ್ನಾಕ ವಾಹನಗಳಿಗೆ ಬೆಂಗಾವಲು ನೀಡಿದ್ದಾರೆ.
ಕೇರಳದಿಂದ ತಮಿಳುನಾಡು ಮೂಲಕ ನಾನು ಕರ್ನಾಟಕಕ್ಕೆ ಬರುತ್ತಿದ್ದೆ. ನನ್ನ ಕಾರು ಮಧುರೈ ಬೈಪಾಸ್ ತಲುಪುತ್ತಿದ್ದಂತೆ ಅಲ್ಲಿಗೆ ಬಂದ ಪೊಲೀಸರು ಕಾರನ್ನು ಪಕ್ಕಕ್ಕೆ ನಿಲ್ಲಿಸುವಂತೆ ಹೇಳಿದರು. ಇದಾದ ನಂತರ ಸ್ವಲ್ಪ ಸಮಯಗಳಲ್ಲೇ ಕರ್ನಾಟಕ ನೋಂದಣಿಯ ಇನ್ನಷ್ಟು ವಾಹನಗಳು ಅಲ್ಲಿಗೆ ಬಂದವು. ನಂತರ ಅಲ್ಲಿಂದ ಹೊರಡುವಂತೆ ಪೊಲೀಸರು ತಿಳಿಸಿದರು. ಕರ್ನಾಟಕದ ಇನ್ನು ಕೆಲ ವಾಹನಗಳ ಜೊತೆ ನಮ್ಮ ಕಾರು ಬರುತ್ತಿತ್ತು. ಹಿಂದೆ ತಿರುಗಿ ನೋಡಿದಾಗ ನನಗೆ ಆಶ್ಚರ್ಯ ಕಾದಿತ್ತು. ತಮಿಳುನಾಡು ಪೊಲೀಸರ ಬೆಂಗಾವಲಿನಲ್ಲಿ ಸುಮಾರು 16 ಕರ್ನಾಟಕ ವಾಹನಗಳು ಬರುತ್ತಿದ್ದವು. ಯಾವುದೇ ತೊಂದರೆಯಾಗದಂತೆ ತಮಿಳುನಾಡು ಪೊಲೀಸರು ಸುರಕ್ಷಿತವಾಗಿ ನಮ್ಮನ್ನೆಲ್ಲಾ ತಮಿಳುನಾಡು ರಾಜ್ಯದ ಗಡಿಯವರೆಗೆ ಬಿಟ್ಟು ಹೋದರು ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ಸೋಮವಾರ ಸುಮಾರು ಮಧ್ಯಾಹ್ನ 2.30 ರ ವೇಳೆಗೆ ಫೇಸ್ ಬುಕ್ ನಲ್ಲಿ ಜೋಯಲ್ ಬಿಂದು ಪೋಸ್ಟ್ ಹಾಕಿದ್ದು, 11 ಸಾವಿರ ಸಲ ಪೋಸ್ಟ್ ಶೇರ್ ಆಗಿದೆ. ತಮಿಳುನಾಡು ಪೊಲೀಸರ ಈ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
Advertisement