ಕೋಝಿಕ್ಕೋಡಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿನ್ನೆ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಕೋಝಿಕ್ಕೋಡಿನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿನ್ನೆ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಪಾಕಿಸ್ತಾನ ಸಂಪೂರ್ಣ ಹತಾಶೆಯಿಂದ ಉರಿ ದಾಳಿ ನಡೆಸಿದೆ: ಅಮಿತ್ ಶಾ

ಭಾರತದಲ್ಲಿ ಭಯೋತ್ಪಾದನೆಯನ್ನು ಪಸರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹೋರಾಡಲು ರಕ್ಷಣಾ ಪಡೆಗೆ ನೆರವಾಗಲು...
ಕೋಝಿಕ್ಕೋಡು: ಭಾರತದಲ್ಲಿ ಭಯೋತ್ಪಾದನೆಯನ್ನು ಪಸರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಹೋರಾಡಲು ರಕ್ಷಣಾ ಪಡೆಗೆ ನೆರವಾಗಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನರು ಒಟ್ಟಾಗಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಗಲಭೆ, ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ ಅವರು, ಭಾರತದ ಸಂವಿಧಾನದ ಮೇಲೆ ನಂಬಿಕೆಯಿಲ್ಲದವರ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದರು. 
ಕೋಝಿಕ್ಕೋಡಿನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮುಕ್ತಾಯ ದಿನವಾದ ಇಂದು ಅಮಿತ್ ಶಾ ಭಾಗವಹಿಸಿ ಉರಿ ಮೇಲೆ ಭಯೋತ್ಪಾದಕ ದಾಳಿಗೆ ಸಂಬಂಧಪಟ್ಟಂತೆ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಅದರಲ್ಲಿ ಅವರು ಪಾಕಿಸ್ತಾನ ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಪಸರಿಸಿ ಅದಕ್ಕೆ ಬೆಂಬಲ ನೀಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.
'' ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ 17 ಪ್ರಯತ್ನಗಳನ್ನು ರಕ್ಷಣಾ ಪಡೆ ವಿಫಲಗೊಳಿಸಿದೆ. ಕಳೆದೊಂದು ವರ್ಷದಲ್ಲಿ ರಕ್ಷಣಾ ಪಡೆ ಸುಮಾರು 170 ಭಯೋತ್ಪಾದಕರನ್ನು ಕೊಂದು ಹಾಕಿದೆ. ಅವರನ್ನು ಪಾಕಿಸ್ತಾನವೇ ಕಳುಹಿಸಿತ್ತು. ಉರಿ ಭಯೋತ್ಪಾದಕ ದಾಳಿಯನ್ನು ಕೂಡ ಪಾಕಿಸ್ತಾನ ಹತಾಶೆಯಿಂದ ನಡೆಸಿದೆ ಎಂದು ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ಹೇಳಿಕೆಯನ್ನು ಅವರು ಕಾರ್ಯಕಾರಿಣಿ ಸಭೆಯ ಇಂದಿನ ಮೊದಲ ಸಭೆಯಲ್ಲಿ ಓದಿದರು.
ಯಾವುದೇ ಚರ್ಚೆ ನಡೆಸದೆ ಈ ಹೇಳಿಕೆಯನ್ನು ಕಾರ್ಯಕಾರಿಣಿ ಅನುಮೋದನೆ ನೀಡಿತು. ಉರಿ ಭಯೋತ್ಪಾದಕ ದಾಳಿ ನಂತರ ದೇಶದ ಜನರ ಆಕ್ರೋಶ, ಸಿಟ್ಟು ಹೊರಬಂದಿದ್ದು, ಬಿಜೆಪಿ ಪಕ್ಷ ಜನರ ನೋವನ್ನು ಅರ್ಥ ಮಾಡಿಕೊಳ್ಳುತ್ತದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಮಾಡಿದ ಭಾಷಣದ ವೇಳೆ ಹತ್ಯೆಗೀಡಾದ ಉಗ್ರಗಾಮಿ ಬುರ್ಹಾನ್ ವಾನಿಯನ್ನು ಹೀರೋ ಅಥವಾ ನಾಯಕ ಎಂದು ಸಂಬೋಧಿಸಿದ್ದು, ಇದರಲ್ಲಿಯೇ ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ, ಭಾರತ ಸೇರಿದಂತೆ ವಿಶ್ವಾದ್ಯಂತ ಉಗ್ರರಿಗೆ ಕುಕೃತ್ಯ ನಡೆಸಲು ಬೆಂಬಲ ನೀಡುತ್ತದೆ ಎಂಬುದು ತಿಳಿಯುತ್ತದೆ ಎಂದರು.
ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಬೆಳೆಸಲು ಪಾಕಿಸ್ತಾನ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತದೆ. ನಿನ್ನೆ ಕೋಝಿಕ್ಕೋಡಿನಲ್ಲಿ ಪ್ರಧಾನ ಮಂತ್ರಿ ಮೋದಿಯವರು ಪಾಕಿಸ್ತಾನದ ವಿರುದ್ಧ ಅತ್ಯಂತ ಪರಿಣಾಮಕಾರಿಯಾದ ಭಾಷಣ ನಡೆಸಿದ ಬೆನ್ನಲ್ಲೇ ಇಂದು ಅಮಿತ್ ಶಾ ಕೂಡ ಪಾಕಿಸ್ತಾನಕ್ಕೆ ಅತ್ಯಂತ ಕಠು ಸಂದೇಶ ರವಾನಿಸಿದ್ದಾರೆ ಎಂದು ಹೇಳಬಹುದು.
ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಶಾ, ಭಾರತದ ಸಂವಿಧಾನದ ಮೇಲೆ ನಂಬಿಕೆಯಿದ್ದವರ ಜೊತೆ ಮಾತ್ರ ಸರ್ಕಾರ ಮಾತುಕತೆ ನಡೆಸಲು ಮುಂದಾಗುತ್ತದೆ. ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ನಿರ್ದೇಶನದ ಪ್ರಕಾರ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗ ಎಂದು ನಾವು ಒತ್ತಿ ಹೇಳುತ್ತೇವೆ. ವಿಶ್ವದ ಯಾವುದೇ ಶಕ್ತಿಗಳು ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಕಾಶ್ಮೀರವನ್ನು ಭಾರತದಿಂದ ಕಿತ್ತುಕೊಳ್ಳಬಹುದು ಎಂದು ಯಾರಾದರೂ ಹಗಲುಗನಸು ಕಾಣುತ್ತಿದ್ದರೆ ಅದು ಮರೀಚಿಕೆಯಷ್ಟೆ. ಅವರ ಹಗಲುಗನಸು ಯಾವತ್ತೂ ನಿಜವಾಗಲು ಸಾಧ್ಯವಿಲ್ಲ ಎಂದು ಶಾ ಪುನರುಚ್ಛರಿಸಿದರು.

Related Stories

No stories found.

Advertisement

X
Kannada Prabha
www.kannadaprabha.com