ಕೇಜ್ರಿವಾಲ್ ಕಾನೂನು ಶುಲ್ಕ 3.42 ಕೋಟಿ: ಲೂಟಿ ಎಂದ ಬಿಜೆಪಿ, ವೈಯಕ್ತಿಕ ಹೋರಾಟ ಅಲ್ಲ ಎಂದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ....
ಅರುಣ್ ಜೇಟ್ಲಿ - ಅರವಿಂದ್ ಕೇಜ್ರಿವಾಲ್
ಅರುಣ್ ಜೇಟ್ಲಿ - ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ  ಕೇಜ್ರಿವಾಲ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟಕ್ಕೆ 3.42 ಕೋಟಿ ರುಪಾಯಿ ವಕೀಲರ ಶುಲ್ಕ ನೀಡಲು ಮುಂದಾಗಿರುವ ದೆಹಲಿ ಸರ್ಕಾರವನ್ನು ಮಂಗಳವಾರ ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ದೆಹಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೆಕರ್ ಹಾಗೂ ಕಿರಣ್ ರಿಜಿಜು ಅವರು, ಕೇಜ್ರಿವಾಲ್ ಅವರು ಜನರ ದುಡ್ಡನ್ನು ದರೋಡೆ ಮತ್ತು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ವೈಯಕ್ತಿಕ ಅಪರಾಧಕ್ಕಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈಗ ಅವರ ಕಾನೂನು ಶುಲ್ಕವನ್ನು ಭರಿಸಲು ಮುಂದಾಗಿರುವ ದೆಹಲಿ ಸರ್ಕಾರದ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದು ಜಾವಡೆಕರ್ ಅರೋಪಿಸಿದ್ದಾರೆ.
ಈ ಪ್ರಕರಣ ಸಂಬಂಧ ಅರುಣ್ ಜೇಟ್ಲಿ ಅವರು 10 ಲಕ್ಷ ರುಪಾಯಿ ಸ್ಟಾಂಪ್ ಸುಂಕ ಕಟ್ಟಿದ್ದಾರೆ. ಅಲ್ಲದೆ ತಮ್ಮ ವಕೀಲರ ಶುಲ್ಕವನ್ನು ಅವರು ವೈಯಕ್ತಿಕವಾಗಿ ಭರಿಸುತ್ತಿದ್ದಾರೆ ಎಂದು ಜಾವಡೆಕರ್ ತಿಳಿಸಿದ್ದಾರೆ.
ಇನ್ನು ದೆಹಲಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು, ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ತನಿಖೆಗೆ ಆದೇಶಿಸಿದ್ದು, ಅದರ ತನಿಖೆ ಮುಂದುವರೆದ ಭಾಗವೇ ಜೇಟ್ಲಿ ಮಾನನಷ್ಟ ಪ್ರಕರಣ. ಇದು ವೈಯಕ್ತಿಕ ಹೋರಾಟ ಅಲ್ಲ. ದೆಹಲಿ ಸರ್ಕಾರದ ಕಾನೂನು ಹೋರಾಟ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮತ್ತೊರ್ವ ಎಎಪಿ ನಾಯಕ ಆಶಿಶ್ ಖೇತನ್ ಅವರು, ಸರಾಮ್ ಜೇಠ್ಮಲಾನಿ ವಾದ ಮಂಡಿಸಲಿದ್ದು, ಜೇಟ್ಲಿ ಅವರು ಶ್ರೀಮಂತರಾಗಿರುವುದರಿಂದ ದುಬಾರಿ ವಕೀಲರನ್ನು ನೇಮಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 
ಈ ಪ್ರಕರಣದಲ್ಲಿ ಕೇಜ್ರಿವಾಲ್ ಪರ ನ್ಯಾಯವಾದಿ ರಾಮ್ ಜೇಠ್ಮಲಾನಿ ವಾದ ಮಂಡಿಸುತ್ತಿದ್ದು, ಇವರ ಶುಲ್ಕ 3.42 ಕೋಟಿ ರುಪಾಯಿ ಆಗಿದೆ. 2016 ಡಿಸೆಂಬರ್ 1ಕ್ಕೆ ಜೇಠ್ಮಲಾನಿ ಅವರು ಕೇಜ್ರಿವಾಲ್ ಪರ ವಾದಿಸುವುದಕ್ಕೆ ವಕೀಲರ ಪೂರ್ವ ನೇಮಕ ಶುಲ್ಕ 1 ಕೋಟಿ ರುಪಾಯಿ ಮತ್ತು ಕೇಜ್ರಿಲಾಲ್ ಪರ ನ್ಯಾಯಾಲಯಕ್ಕೆ ಹಾಜರಾಗಿರುವುದಕ್ಕೆ 22 ಲಕ್ಷ ರುಪಾಯಿ ಶುಲ್ಕ ವಿಧಿಸಿದ್ದರು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿ ವಾದ ಮಾಡುವುದಕ್ಕಾಗಿ ಜೇಠ್ಮಲಾನಿ ಅವರು 11 ಬಾರಿ ಹಾಜರಾಗಿದ್ದಾರೆ. ಹಾಗಾಗಿ ಅವರ ಒಟ್ಟು ಶುಲ್ಕ 3.42 ಕೋಟಿ ರುಪಾಯಿ ಆಗಿದೆ.
ಆದರೆ ಈ ಶುಲ್ಕವನ್ನು ದೆಹಲಿ ಸರ್ಕಾರ ಪಾವತಿ ಮಾಡಬೇಕೆಂದು ಕೇಜ್ರಿವಾಲ್ ಆಶಿಸಿದ್ದಾರೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಾವತಿ ಮಾಡಬೇಕಾದ ಬಿಲ್‍ನ್ನು  ಲೆ.ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಕಳಿಸಿದ್ದಾರೆ. ಕೇಜ್ರಿವಾಲ್ ಅವರ 'ಅನಧಿಕೃತ'  ಬಿಲ್‍ನ್ನು ಸರ್ಕಾರ ಪಾವತಿ ಮಾಡಬೇಕೇ? ಬೇಡವೇ? ಎಂಬುದರ ಬಗ್ಗೆ ಬೈಜಾಲ್ ಅವರು ಕಾನೂನು ತಜ್ಞರ ಮೊರೆ ಹೋಗಿದ್ದಾರೆ
ಈ ಸುದ್ದಿಯ ಬೆನ್ನಲ್ಲೇ ತಾನು ಕೇಜ್ರಿವಾಲ್‍ ಅವರ ಪರ ವಾದಿಸುವುದಕ್ಕೆ ದುಡ್ಡು  ತೆಗೆದುಕೊಳ್ಳುವುದಿಲ್ಲ ಎಂದು ಜೇಠ್ಮಲಾನಿ ಹೇಳಿದ್ದಾರೆ.
ಕೇಜ್ರಿವಾಲ್ ತಮಗೆ ನೀಡಲಿರುವ ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿಲ್ಲ. ಅವರನ್ನು ಬಡ ಕಕ್ಷಿದಾರ ಎಂದು ಪರಿಗಣಿಸಿ ಅವರಿಗೆ ಉಚಿತ ಸೇವೆ ನೀಡಲಾಗುವುದು. ನಾನು ಶ್ರೀಮಂತ ಕಕ್ಷಿದಾರರಿಗೆ ಮಾತ್ರ ಶುಲ್ಕ ವಿಧಿಸುತ್ತೇನೆ.  ಬಡವರಿಗೆ ನಾನು ಉಚಿತವಾಗಿ ಸೇವೆ ನೀಡುತ್ತೇನೆ. ಅರುಣ್ ಜೇಟ್ಲಿ ಅವರು ನನ್ನ ವಾದಗಳಿಗೆ ಹೆದರುತ್ತಾರೆ ಎಂದು ಜೇಠ್ಮಲಾನಿ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com