ನವದೆಹಲಿ: ತ್ರಿವಳಿ ತಲಾಕ್ ನಿಷೇಧವನ್ನು ಬೆಂಬಲಿಸಿರುವ ಅಖಿಲ ಭಾರತ ಶಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಸ್ ಪಿ ಎಲ್ ಬಿ), ಗೋಹತ್ಯೆ ನಿಷೇಧದ ವಿರುದ್ಧ ಬುಧವಾರ ಫತ್ವಾ ಹೊರಡಿಸಿದೆ.
ಎಎನ್ಐ ವರದಿಯ ಪ್ರಕಾರ, ಇಂದು ನಡೆದ ಶಿಯಾ ಮುಸ್ಲಿಂ ಕಾನೂನು ಮಂಡಳಿಯ ಸಭೆಯಲ್ಲಿ ತ್ರಿವಳಿ ತಲಾಕ್ ನಿಷೇಧ, ಗೋಹತ್ಯೆ ವಿರುದ್ಧ ಫತ್ವಾ ಹಾಗೂ ಮಾತುಕತೆ ಮೂಲಕ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಪರಿಹರಿಸಿಕೊಳ್ಳುವ ಮೂರು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಿದೆ.
ಇರಾಕ್ ನ ಖ್ಯಾತ ಶಿಯಾ ಧರ್ಮ ಗುರು ಅಯತುಲ್ಲಾ ಶೇಕ್ ಬಸೀರ್ ಹುಸೇನ್ ನಜಫಿ ಅವರಿಂದ ಸ್ಪಷ್ಟನೆ ಪಡೆದ ನಂತರ ಇಂದು ಲಖನೌನಲ್ಲಿ ನಡೆದ ಶಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಗೋಹತ್ಯೆ ವಿರುದ್ಧ ಫತ್ವಾ ಹೊರಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಗೋಹತ್ಯೆಯಿಂದಾಗಿ ದೇಶದಲ್ಲಿ ಕೋಮು ಸೌಹಾರ್ದತೆ ಕೆಡುತ್ತಿದೆ ಎಂದು ಶಿಯಾ ಮಂಡಳಿ ಹೇಳಿದೆ.
ಗೋಹತ್ಯೆ ನಿಷೇಧ ಬೆಂಬಲಿಸಿದ್ದ ಅಜ್ಮೇರ್ ದರ್ಗಾದ ಮುಖ್ಯಸ್ಥ ಹಾಗು ಸುನ್ನಿ ಮುಸ್ಲಿಂ ಧರ್ಮ ಗುರು ಸೈಯದ್ ಝೈನುಲ್ ಅಬೇದಿನ್ ಅವರನ್ನು ಅವರ ಸಹೋದರ ಸೈಯದ್ ಅಲ್ಲಾದೀನ್ ಆಲಿಮಿ ಅವರು ದರ್ಗಾ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಿದ ಬೆನ್ನಲ್ಲೇ ಶಿಯಾ ಮುಸ್ಲಿಂ ಕಾನೂನು ಮಂಡಳಿ ಗೋಹತ್ಯೆ ನಿಷೇಧ ಬೆಂಬಲಿಸಿದೆ.